ನಕಲು ಮುಕ್ತ ಪರೀಕ್ಷೆ ನಡೆಸಿ

bkt-9-2
ಬಾಗಲಕೋಟೆ ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳ ಸಿದ್ದತೆ ಕುರಿತು ಸಭೆ ಜರುಗಿತು.
Published on

ಬಾಗಲಕೋಟೆ: ಜಿಲ್ಲೆಯಲ್ಲಿ ಜೂ.೧೨ ರಿಂದ ಜರುಗಲಿರುವ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ನಕಲು ಮುಕ್ತವಾಗಿ ಪರೀಕ್ಷೆ ನಡೆಸುವಂತೆ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳ ಸಿದ್ದತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಟ್ಟು ೧೪ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಬಾದಾಮಿಯಲ್ಲಿ ೨, ಬಾಗಲಕೋಟೆ ೩, ಬೀಳಗಿ, ಹುನಗುಂದದಲ್ಲಿ ತಲಾ ೧, ಜಮಖಂಡಿಯಲ್ಲಿ ೪ ಹಾಗೂ ಮುಧೋಳದಲ್ಲಿ ೩ ಪರೀಕ್ಷಾ ಕೇಂದ್ರಗಳಿವೆ. ಪೂರಕ ಪರೀಕ್ಷೆಯಲ್ಲಿ ಒಟ್ಟು ೪೬೭೯ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.

ಪರೀಕ್ಷೆಗೆ ೧೪ ಮುಖ್ಯ ಅಧೀಕ್ಷಕರು, ೩ ಜನ ಉಪ ಮುಖ್ಯ ಅಧೀಕ್ಷಕರು, ೧೪ ಜನ ಅಭಿರಕ್ಷಕರು, ೧೪ ಮೊಬೈಲ್ ಸ್ವಾಧೀನಾಧಿಕಾರಿಗಳು ಹಾಗೂ ೧೪ ಸ್ಥಾನಿಕ ಜಾಗೃತ ದಳದ ಅಽಕಾರಿಗಳನ್ನು ನೇಮಿಸಲಾಗಿದ್ದು, ತಮ್ಮ ವಹಿಸಿಕೊಟ್ಟ ಕರ್ತವ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಂದ ಅಲ್ಲಿನ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ ಇತ್ಯಾದಿ ಮೂಲಭೂತ ಸೌಲಭ್ಯಗಳು ಬಗ್ಗೆ ದೃಢೀಕರಿಸಿಕೊಳ್ಳಲು ತಿಳಿಸಿದರು.

ಡಿವೈಪಿಸಿಯ ಉಪ ಸಮನ್ವಯಾಧಿಕಾರಿ ಜಾಸ್ಮೀನ್ ಕಿಲ್ಲೇದಾರ ಪರೀಕ್ಷಾ ಸಿದ್ದತೆಯ ಬಗ್ಗೆ ಸಭೆಗೆ ತಿಳಿಸಿದರು. ಸಭೆಯಲ್ಲಿ ಡಿವೈಪಿಸಿಯ ಸಮನ್ವಯಾಧಿಕಾರಿ ಸಿ.ಆರ್.ಓಣಿ, ಪರೀಕ್ಷಾ ನೋಡಲ್ ಅಧಿಕಾರಿ ಹಾಲವರ ಸೇರಿದಂತೆ ಪರೀಕ್ಷಾ ಮುಖ್ಯ ಅಧೀಕ್ಷಕರು ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net