

ಬಾಗಲಕೋಟೆ: ಜಿಲ್ಲೆಯಲ್ಲಿ ಮಾರ್ಚ 25 ರಿಂದ ಎಪ್ರೀಲ್ 6 ವರೆಗೆ ಜರುಗಲಿರುವ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯನ್ನು ನಕಲು ಮುಕ್ತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‍ನಲ್ಲಿಂದು ಜರುಗಿದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಟ್ಟು 90 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಯಾವುದೇ ರೀತಿಯ ಅನಾನುಕೂಲವಾಗದಂತೆ ಬೇಕಾಗುವ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಂಡು ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಎಲ್ಲ ರೀತಿಯ ಕ್ರಮಕೈಗೊಳ್ಳಲು ತಿಳಿಸಿದರು.
ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಜೀವನದ ಮುಂದಿನ ಹೆಜ್ಜೆಗೆ ಅನುವಾಗುತ್ತಿದ್ದು, ನಕಲುಮುಕ್ತವಾಗಿ ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮುವಂತೆ ಮಾಡಬೇಕು. ಸಮಯಕ್ಕೆ ಮಹತ್ವ ಕೊಟ್ಟು ಸುಸೂತ್ರವಾಗಿ ಪರೀಕ್ಷೆಗಳು ನಡೆಯಬೇಕು. ಸಮಯಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆ ಆಯಾ ಪರೀಕ್ಷಾ ಕೇಂದ್ರಕ್ಕೆ ತಲುಪಿಸುವ ಕೆಲಸವಾಗಬೇಕು. ಪರೀಕ್ಷಾ ಕಾರ್ಯಕ್ಕೆ ನೀಡಲಾದ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಯಾವುದೇ ರೀತಿಯ ಕಾನೂನು ಬಾಹಿತಿ ಚಟುವಟಿಕೆ, ಅವ್ಯವಹಾರ ನಡೆಯದಂತೆ ಪರೀಕ್ಷಾ ಕೇಂದ್ರಗಳಿಂದ 200 ಮೀಟರ್ ವ್ಯಾಪ್ತಿಯಲ್ಲಿ ಕಲಂ 144 ಜಾರಿಗೊಳಿಸಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತ ಸಿಇಓ ಶಶಿಧರ ಕುರೇರ ಮಾತನಾಡಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಉತ್ತಮವಾದ ಡೆಸ್ಕ ವ್ಯವಸ್ಥೆ, ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಮಾಡಬೇಕು. ಪರೀಕ್ಷೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪಾರದರ್ಶಕ ಹಾಗೂ ನಕಲು ಮುಕ್ತವಾಗಿ ಪರೀಕ್ಷೆ ನಡೆಸಲು ತಿಳಿಸಿದ ಅವರು ವಿದ್ಯಾರ್ಥಿಗಳಿಗೆ ಈ ಹಂತದ ಪರೀಕ್ಷೆಗಳು ಮಹತ್ವವಾಗಿದ್ದು, ಪರೀಕ್ಷೆ ಬರೆಯಲು ಉತ್ತಮ ವಾತಾವರಣ ನಿರ್ಮಿಸುವ ಕಾರ್ಯವಾಗಬೇಕೆಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 90 ಪರೀಕ್ಷಾ ಕೇಂದ್ರಗಳಿಗೆ 90 ಮುಖ್ಯ ಅಧೀಕ್ಷಕರು, 48 ಹೆಚ್ಚುವರಿ ಅಧೀಕ್ಷಕರನ್ನು, 90 ಅಭಿರಕ್ಷಕರು, 90 ಮೊಬೈಲ್ ಸ್ವಾಧಿನಾಧಿಕಾರಿಗಳು, 90 ಸ್ಥಾನಿಕ ಜಾಗೃತ ದಳ, 1390 ಕೊಠಡಿ ಮೇಲ್ವಿಚಾರಕರು ಹಾಗೂ 33 ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಒಟ್ಟು 33193 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಅದರಲ್ಲಿ 31307 ರೆಗ್ಯೂಲರ ಪ್ರೇಶ್, 195 ರೆಗ್ಯೂಲರ್ ಪುನರಾವರ್ತಿತ, 403 ಖಾಸಗಿ ಫ್ರೆಸ್, 1288 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಇದ್ದಾರೆ. ಪರೀಕ್ಷಾ ಸಿದ್ದತೆಗೆ ಕೈಗೊಂಡ ಕ್ರಮಗಳನ್ನು ಸಭೆಗೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಉಪಸ್ಥಿತರಿದ್ದರು.