

ಬಾಗಲಕೋಟೆ: ಉತ್ತರ ಕರ್ನಾಟಕದ ೧೩ ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ಅಂದಾಜು ೨ ಲಕ್ಷಕ್ಕೂ ಅಽಕ ಜನರಿಗೆ ನಕಲಿ ಜಾತಿ ಪ್ರಮಾಣ ಪತ್ರ ಕೊಡಲಾಗಿದೆ. ಇದರಿಂದ ನೈಜ ಫಲಾನುಭವಿಗಳಿಗೆ ಅನ್ಯಾಯವಾಗಿದೆ. ಬರುವ ಮಹರ್ಷಿ ವಾಲ್ಮೀಕಿ ಜಯಂತಿ ಒಳಗಾಗಿ ಆ ಎಲ್ಲ ನಕಲಿ ಪ್ರಮಾಣ ಪತ್ರಗಳನ್ನು ರದ್ದುಗೊಳಿಸದೇ ಇದ್ದರೆ ರಾಜ್ಯ ಸರ್ಕಾರದ ವಿರುದ್ಧ ವಿರುದ್ಧ ಉಗ್ರಸ್ವರೂಪದ ಹೋರಾಟಕ್ಕೆ ಇಳಿಯಲಾಗುವುದು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ರಾಜೇನಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಶನಿವಾರ ರಾತ್ರಿ ನವನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಉತ್ತರ ಕರ್ನಾಟಕದ ೧೩ ಜಿಲ್ಲೆಗಳ ಸಂಘಟನೆ ಮುಖಂಡರು ಹೋರಾಟದ ಪೂರ್ವಭಾವಿ ಸಭೆ ನಡೆಸಿ, ಭಾನುವಾರ ಸಮಾಜದ ಮುಖಂಡರು ಸುದ್ದಿಗೋಷ್ಠಿಯಲ್ಲಿ ಸಭೆಯ ವಿವಿರವನು ಹರಿವಿದರು.
ಉತ್ತರ ಕರ್ನಾಟಕ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ರಾಜ್ಯಾಧ್ಯಕ್ಷ ಶ್ರವಣಕುಮಾರ ನಾಯಕ, ಪ್ರಧಾನ ಕಾರ್ಯದರ್ಶಿ ಮಾರೆಪ್ಪ ನಾಯಕ ಮಗ್ದಂಪೂರ ಮತ್ತಿತರರ ಮುಖಂಡರು, ಕೇಂದ್ರ ಸರ್ಕಾರ ನಾಯಕ, ವಾಲ್ಮೀಕಿ, ನಾಯ್ಕಡ್ ಸಮುದಾಯದ ಪರ್ಯಾಯ ಹೆಸರು ತಳವಾರ ಮತ್ತು ಪರಿವಾರವನ್ನು ಎಸ್ಟಿಗೆ ಸೇರಿಸಿ ಗೆಜೆಟ್ ಹೊರಡಿಸಿದೆ. ತಳವಾರ ಎಂದು ಪ್ರತ್ಯೇಕ ಜಾತಿ ಅಲ್ಲ. ತಳವಾರ ಎನ್ನುವುದು ವೃತ್ತಿ. ವಿವಿಧ ಜಾತಿಗಳಲ್ಲೂ ತಳವಾರ ಹೆಸರಿನವರು ಇದ್ದಾರೆ. ವಾಲ್ಮೀಕಿ ಸಮಾಜದಲ್ಲಿ ಬರುವ ತಳವಾರ ಹಾಗೂ ಪರಿವಾರ ಹೆಸರಿನವರಿಗೆ ಮಾತ್ರ ಎಸ್ಟಿ ಪ್ರಮಾಣ ಪತ್ರ ಪಡೆಯಲು ಅರ್ಹರು ಎಂದರು.
ಈ ವಾಸ್ತವ ಗೊತ್ತಿದ್ದರೂ ಹಿಂದುಳಿದ ವರ್ಗಗಳಲ್ಲಿ ಇರುವ ಇತರೆ ಜಾತಿಗಳಲ್ಲಿನ ತಳವಾರ ಕುಟುಂಬದ ಅನೇಕ ಸದಸ್ಯರು ಎಸ್ಟಿ ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುತ್ತಿದ್ದಾರೆ. ಅಽಕಾರಿಗಳು ಎಗ್ಗಿಲ್ಲದೇ ಕೊಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಅಽಕಾರಿಗಳ ಗಮನಕ್ಕೆ ತಂದರೂ ಅದು ನಿಂತಿಲ್ಲ. ನಾವು ಕೋರ್ಟ್ಗೂ ಹೋಗಿದ್ದೇವೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಕೂಡಲೇ ನಕಲಿ ಜಾತಿ ಪ್ರಮಾಣ ಪತ್ರ ರದ್ದು ಪಡಿಸಲು ಸಂಬಂಧಪಟ್ಟ ಅಽಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಅದು ವಾಲ್ಮೀಕಿ ಜಯಂತಿ ಒಳಗಾಗಿ ಈ ಕೆಲಸ ಆಗಬೇಕು. ಇಲ್ಲವಾದರೆ ಮೊದಲ ಹಂತದಲ್ಲಿ ರಾಜ್ಯದಲ್ಲಿ ಇರುವ ಎಸ್ಟಿ ಸಮುದಾಯದ ಶಾಸಕರ ಮನೆ ಎದುರು ಬಾಯಿ ಬಡಿದುಕೊಳ್ಳುವ ಹೋರಾಟ ನಡೆಸಲಾಗುವುದು. ಬಳಿಕ ಎಲ್ಲ ಶಾಸಕರ ಮನೆಗಳ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಗೊಂದಲಕ್ಕೆ ಹಿಂದಿನ ಸಿಎಂ ಬಸವರಾಜ್ ಬೊಮ್ಮಾಯಿ ಅವರು ನೀಡಿದ್ದ ಹೇಳಿಕೆಯೇ ಕಾರಣ. ಪ್ರವರ್ಗ ೧ ರಲ್ಲಿ ಇರುವ ಹಿಂದುಳಿದ ವರ್ಗದಲ್ಲಿ ಬರುವ ಜಾತಿಗಳಲ್ಲಿನ ತಳವಾರ ಹೆಸರಿನವರಿಗೂ ಎಸ್ಟಿ ಜಾತಿ ಪ್ರಮಾಣ ಪತ್ರ ಕೊಡಲಾಗುವುದು ಎಂದಿದ್ದು ಈ ರಾದ್ಧಾಂತ ಶುರುವಾಗಿದೆ. ಪರಿಣಾಮ ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಎಸ್ಟಿ ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಅನುಭವಿಸಿತು. ಈಗ ಸಿದ್ದರಾಮಯ್ಯ ಸರ್ಕಾರ ನಮಗೆ ನ್ಯಾಯ ಕೊಡದೇ ಇದ್ದರೆ ಕಾಂಗ್ರೆಸ್ ಪಕ್ಷಕ್ಕೂ ಮುಂದಿನ ದಿನಗಳಲ್ಲಿ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ನಮ್ಮ ಸಮಾಜದ ಶಾಸಕರು, ಸಚಿವರು ಕೂಡಲೇ ಸಿಎಂ ಮೇಲೆ ಒತ್ತಡ ಹಾಕಿ ನಕಲಿ ಜಾತಿ ಪ್ರಮಾಣ ಪತ್ರ ರದ್ದುಪಡಿಸಿ, ತಪ್ಪಿತಸ್ಥ ಅಽಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಅವರ ವಿರುದ್ಧವೇ ಸಮಾಜ ಬೀದಿಗೆ ಇಳಿದು ಉಗ್ರ ಹೋರಾಟ ನಡೆಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಾಗಲಕೋಟೆ ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷ ದ್ಯಾಮಣ್ಣ ಗಾಳಿ, ಮಾಜಿ ಅಧ್ಯಕ್ಷ ರಾಜು ನಾಯ್ಕರ್, ಯಾದಗಿ ಜಿಲ್ಲಾ ಅಧ್ಯಕ್ಷ ಶರಣಪ್ಪ ಜಾಕನಳ್ಳಿ, ಮುಖಂಡರಾದ ಗೌಡಪ್ಪಗೌಡ ಅಲ್ದಾಳ, ದೊಡ್ಡಯ್ಯ ನಾಯಕ, ಯಲ್ಲಪ್ಪ ಕ್ಯಾದಿಗೇರಿ ಮತ್ತಿತರರು ಇದ್ದರು.