ನಂದಿಕಟ್ಟಾ ಗ್ರಾಮಕ್ಕೆ ಪ್ರತ್ಯೇಕ ಬಸ್ ಓಡಿಸಿ

3mnd1
Published on

ಮುಂಡಗೋಡ: ಸಮರ್ಪಕ ಬಸ್ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ತಾಲೂಕಿನ ನಂದಿಕಟ್ಟಾ ಗ್ರಾ.ಪಂ. ವ್ಯಾಪ್ತಿಯ ಶಾಲಾ- ಕಾಲೇಜ್ ವಿದ್ಯಾರ್ಥಿಗಳು ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲಗೆ ಬುಧವಾರ ಮನವಿ ಸಲ್ಲಿಸಿದರು.

ಫೆ. 1ರಿಂದ ಶಾಲಾ-ಕಾಲೇಜ್​ಗಳು ಆರಂಭವಾಗಿದ್ದು, ಸರಿಯಾದ ಸಮಯಕ್ಕೆ ಬಸ್ ಬಾರದ್ದರಿಂದ ತೊಂದರೆಯಾಗುತ್ತಿದೆ. ನಮ್ಮ ಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 250-300ರಷ್ಟು ಇರುವುದರಿಂದ ನಂದಿಕಟ್ಟಾ ಗ್ರಾಮಕ್ಕೆ ಪ್ರತ್ಯೇಕ ಬಸ್ ಸಂಚಾರ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಮೊದಲೇ ತಿಳಿಸಲಾಗಿತ್ತು. ಆದರೆ, ಅವರಿಂದ ಯಾವುದೆ ಸ್ಪಂದನೆ ದೊರೆತಿಲ್ಲ. ಎರಡು ದಿನಗಳಲ್ಲಿ ನಮ್ಮ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ಸ್ವೀಕರಿಸಿದ ವಿ.ಎಸ್. ಪಾಟೀಲ ಮಾತನಾಡಿ, ಮಾರ್ಗದಲ್ಲಿ ಎಲ್ಲಿಯೇ ವಿದ್ಯಾರ್ಥಿಗಳು ಬಸ್ ನಿಲ್ಲಿಸಲು ಕೋರಿದರೆ ಹತ್ತಿಸಿಕೊಂಡು ಹೋಗಬೇಕು ಎಂದು ಚಾಲಕ ಮತ್ತು ನಿರ್ವಾಹಕರಿಗೆ ಸೂಚಿಸಲಾಗಿದೆ. ಯಲ್ಲಾಪುರ ಮತ್ತು ಕಲಘಟಗಿಯಿಂದ ಬಸ್​ಗಳು ಬರಬೇಕು. ಇಲ್ಲಿಯೇ ಡಿಪೋ ಆದ ನಂತರ ಈ ಸಮಸ್ಯೆ ಇರುವುದಿಲ್ಲ. ಸದ್ಯದ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದರು. ಬಳಿಕ ವಿದ್ಯಾರ್ಥಿಗಳು ಬಸ್ ನಿಲ್ದಾಣ ನಿಯಂತ್ರಣಾಧಿಕಾರಿಗಳಿಗೂ ಮನವಿ ನೀಡಿದರು.

ಸಂತೋಷ ಹರಿಜನ, ದೀಪಾ ಹಂಚಿನಮನಿ, ಸುನೀಲ ಕೊಟಗುಣಸಿ, ಮಲ್ಲಿಕಾರ್ಜುನ ಗೌಳಿ, ಪ್ರಿಯಾ ಎಂ.ಪಿ., ಜಗದೀಶ ಹೊಸಮನಿ, ಬಸವರಾಜ ಕಮ್ಮಾರ, ಪ್ರಿಯಾಂಕಾ ರಾಧಾಪುರ, ಮೋಹನ ಹರಿಜನ, ಅಭಿಷೇಕ ನೇಮಣ್ಣನವರ, ವಿನಾಯಕ ರಜಪೂತ, ಸಂತೋಷ ಹರಿಜನ, ದೀಪಾ ಭೋಸ್ಲೆ, ಶಿಲ್ಪಾ ಅಂಗಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net