

ಬಾಗಲಕೋಟೆ: ಮಾಜಿ ಶಾಸಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರ ಜೀವನ ಗಾಥೆಯ ಆತ್ಮಕಥನ ನಂಜುಂಡ ಕೃತಿ ಇಂದಿನ ರಾಜಕಾರಣಿಗಳಿಗೆ ಆದರ್ಶವಾಗಿದೆ ಎಂದು ಬೀಳಗಿ ಶಾಸಕ ಜೆ.ಟಿ.ಪಾಟೀಲ ಬಣ್ಣಿಸಿದರು.
ನವನಗರದ ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಭವನದಲ್ಲಿ ಗುರುವಾರ ಸಂಜೆ ನಡೆದ ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಅವರ ಆತ್ಮಕಥನ ನಂಜುಂಡ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ವ್ಯಕ್ತಿ ತನ್ನ ಆತ್ಮಕಥನದ ಮೂಲಕ ವ್ಯಕ್ತಿತ್ವ ನೈಜತೆಯನ್ನು ಸಮಾಜದ ಮುಂದೆ ತಾನೆ ಪರಿಚಯಿಸಿಕೊಳ್ಳುವಲ್ಲಿ ಅವರ ಪ್ರಾಮಾಣಿಕತೆ ಕಾರಣವಾಗಿದೆ. ನಂಜಯ್ಯನಮಠ ಅವರು ಕೇವಲ ರಾಜಕಾರಣಿಯಲ್ಲದೆ ಇವರ ವ್ಯಕ್ತಿತ್ವ ಬಹುಮುಖವಾದದ್ದಾಗಿದೆ. ಇವರಲ್ಲಿನ ಶ್ರೀಮಂತಿಕೆ ನೇರ ನಡೆನುಡಿಯ ಪ್ರಖರವಾದಿ ಸ್ಥಿತ ಪ್ರಜ್ಞೆ ಇವರಲ್ಲಿ ಕಾಣಲು ಸಾಧ್ಯವಾಗಿದೆ ಎಂದರು.
ನಂಜಯ್ಯನಮಠ ಅವರು ನಾಯಕನಿಗೆ ನಿಷ್ಠೆ ಪ್ರದರ್ಶಿಸಿದ್ದಕ್ಕಾಗಿ ಸಚಿವ ಸ್ಥಾನ ಪಡೆದುಕೊಳ್ಳಲು ಆಗಲಿಲ್ಲ. ಎಚ್.ಕೆ. ಪಾಟೀಲರನ್ನು ಬಿಟ್ಟು ಬಂದರೆ ಸಚಿವರನ್ನಾಗಿ ಮಾಡುತ್ತೇನೆ ಎಂದು ಅವರನ್ನು ಆಹ್ವಾನಿಸಿದ್ದರು. ಆದರೆ, ಅವರು ಸಚಿವ ಸ್ಥಾನ ಬಿಟ್ಟರೆ ಹೊರತು, ನಿಷ್ಠೆ ಬದಲಾಯಿಸಲಿಲ್ಲ ಎಂದು ಹೇಳಿದರು.
ವಿರೋಽಗಳನ್ನು, ಗೆಳೆಯರನ್ನು ಒಂದೇ ತೆರನಾಗಿ ಕಾಣುತ್ತಾರೆ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗುವ ಗುಣ ಬೆಳೆಸಿಕೊಂಡಿದ್ದಾರೆ. ಅನೇಕ ನೋವುಗಳನ್ನು ನುಂಗಿಕೊಂಡು ರಾಜಕೀಯ ಜೀವನದಲ್ಲಿ ಸಾಗಿಕೊಂಡು ಬಂದಿದ್ದಾರೆ. ನಂಜಯ್ಯನಮಠ ಅವರು ಬರೀ ರಾಜಕಾರಣಿ ಮಾತ್ರವಲ್ಲದೇ ಸಾಹಿತಿ, ನಾಟಕಕಾರ, ಗಾಯಕ. ಹೀಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಽಕಾರ ಸಿಗಲಿ ಎಂದು ಹಾರೈಸಿದರು.
ಲೇಖಕ ಎಸ್.ಜಿ. ನಂಜಯ್ಯನಮಠ ಮಾತನಾಡಿ, ನಾನು ಬಹಳ ಸುಖದಲ್ಲಿ ಬೆಳೆದಿಲ್ಲ. ನನಗಿದ್ದ ಸ್ಥಿತಿಯನ್ನೇ ಸುಖವಾಗಿಸಿಕೊಂಡು ಬದುಕಿದ್ದೇನೆ. ಆಗಿನ ರಾಜಕಾರಣ ಮಾದರಿಯದ್ದಾಗಿತ್ತು. ಮೊದಲ ಬಾರಿಗೆ ಚುನಾವಣೆಗೆ ನಿಂತಾಗ ಜನರೇ ೯೬ ಸಾವಿರ ಸಂಗ್ರಹಿಸಿಕೊಟ್ಟಿದ್ದರು ಎಂದು ತಮ್ಮ ಮೊದಲ ಚುನಾವಣೆಯ ಸಂದರ್ಭವನ್ನು ಮೆಲಕು ಹಾಕಿದರು.
ಹೌಸಿಲ್ಲದ ನಾನು ಹೌಸಿಂಗ್ ಬೋರ್ಡ್ ಚೇರಮನ್‌ನಾಗಿ ಕೆಲಸ ಮಾಡಿದ್ದೇನೆ. ರಾಜಕೀಯ ಜೀವನಕ್ಕೆ ಕಾಲಿಟ್ಟಿದಾಗಿನಿಂದ ಯಾವತ್ತೂ ಖಾಲಿ ಇಲ್ಲ. ಭತ್ಯೆ, ಪಗಾರ ಮಾತ್ರ ಇರುತ್ತಿರಲಿಲ್ಲ. ರಾಜ್ಯದಾದ್ಯಂತ ಸ್ನೇಹಿತರನ್ನು ಸಂಪಾದಿಸಿದ್ದೇನೆ. ಜೀವನ ತೆರೆದ ಪುಸ್ತಕವಾಗಿರಬೇಕು ಎಂದು ಆತ್ಮಕಥನ ಬರೆದಿದ್ದೇನೆ. ಇದು ಜೀವನದ ಸತ್ಯ ಸಾಕ್ಷೀಕರಿಸುತ್ತದೆ ಎಂದು ವಿವರಿಸಿದರು.
ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಜಿ.ಜಿ.ಹಿರೇಮಠ ಕೃತಿ ಅವಲೋಕನ ಮಾಡಿ, ನಂಜುಂಡ ಕೃತಿಯಲ್ಲಿ ಪ್ರತಿಯೊಂದು ಘಟನೆಗಳು ಸ್ವವಿವರವಾಗಿ ತಿಳಿಸುತ್ತಾ, ನಂಜುಂಡ ಕೃತಿ ಅವರು ಉಂಡ ನಂಜು ಮತ್ತು ಸಿಹಿ ಎರಡನ್ನು ಪುಸ್ತಕದ ಮೂಲಕ ಅಭಿವ್ಯಕ್ತಗೊಳಿಸಿದ್ದಾರೆ ಎಂದರು.
ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ದೇವಾಂಗ ಸಮಾಜದ ರಾಜ್ಯಾಧ್ಯಕ್ಷರಾದ ರವೀಂದ್ರ ಕಲಬುರಗಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಮೇಶ ಬದ್ನೂರು, ಮಲ್ಲಿಕಾರ್ಜುನ ಚರಂತಿಮಠ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಸಾಪ ಜಿಲ್ಲಾ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಸಜ್ಜನ ಶುಭ ಸಂದೇಶ ವಾಚಿಸಿದರು. ಜಾನಪದ ಕಲಾವಿದರಾದ ಪವಿತ್ರಾ ಜಕ್ಕಪ್ಪನವರ ಹಾಗೂ ರಂಗಪ್ಪ ಹಲಕುರ್ಕಿ ತತ್ವಪದ ಹಾಡಿದರು. ಯೋಗೇಶ ಲಮಾಣಿ ವಂದಿಸಿದರು.