

ಬಾಗಲಕೋಟೆ: ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆ ವಜೀರ ಸಮಾಜದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಗ್ರಂಥ ಬಿಡುಗಡೆ ಸಮಾರಂಭವು ನ.೧೩ ರಂದು ಬೆಳಗ್ಗೆ ೧೦ ಗಂಟೆಗೆ ವಿದ್ಯಾಗಿರಿಯ ಸಾಯಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠದ ಅಧ್ಯಕ್ಷ ಜಿ.ಎನ್.ಪಾಟೀಲ ಹೇಳಿದರು.
ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆ ವಜೀರ ಕ್ಷೇಮಾಭಿವೃದ್ಧಿ ಸಂಘ, ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠ ಹಾಗೂ ಹಂಡೆವಜೀರ ಸಮಾಜ ಜಿಲ್ಲಾ ಘಟಕ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ೨೦೨೧-೨೨ ನೇ ಸಾಲಿನ ಶೈಕ್ಷಣಿಕ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.೯೦ ಮತ್ತು ಪಿಯುಸಿಯಲ್ಲಿ ಶೇ.೮೫ ಅಂಕಗಳಿಗಿಂತ ಹೆಚ್ಚು ಅಂಕಗಳನ್ನು ಪಡೆದಂತಹ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚರಂತಿಮಠದ ಪ್ರಭು ಸ್ವಾಮೀಜಿ, ಬಿಲ್‌ಕೆರೂರಿನ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕರಿ ಬಂಟನಾಳ ಗುರು ಗಂಗಾಧರೇಶ್ವರ ಹಿರೇಮಠದ ಶಿವ ಕುಮಾರ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಶಾಸಕ ವೀರಣ್ಣ ಚರಂತಿಮಠ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಎಸ್.ಆರ್.ಪಾಟೀಲ ಪುಷ್ಪಾರ್ಚನೆ ಮಾಡಲಿದ್ದಾರೆ. ಶಾಸಕ ದೊಡ್ಡನಗೌಡ ಪಾಟೀಲ ಗ್ರಂಥ ಬಿಡುಗಡೆ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಕೈಪಿಡಿ ಬಿಡುಗಡೆಗೊಳಿಸಲಿದ್ದಾರೆ. ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀರ ಸಮಾಜದ ರಾಜ್ಯಾಧ್ಯಕ್ಷ ಡಾ.ಎಸ್.ಎಸ್.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ನೆಲ್ಲೂರನ ಡಾ.ಡಿ.ಎನ್.ಪಾಟೀಲ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಎನ್.ಪಾಟೀಲ, ಸಮಾಜದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಜುಳಾ ರೇವಡಿ, ಗೌರವಾಧ್ಯಕ್ಷ ಎಸ್.ಆರ್.ದೇಸಾಯಿಗೌಡರ, ಮಹಿಳಾ ಗೌರವಾಧ್ಯಕ್ಷೆ ಮಂಗಳಾದೇವಿ ಬಿರಾದಾರ, ಉಪಾಧ್ಯಕ್ಷ ಬಿ.ವಿ.ಪಾಟೀಲ, ಯುವ ಘಟಕದ ಬಿ.ಎಸ್.ಪಾಟೀಲ, ಬಿ.ಸಿ.ಪಾಟೀಲ, ವಿ.ಕೆ.ಪಾ ಟೀಲ, ಬಿ.ಎಸ್.ಪಾಟೀಲ, ಎಂ.ಬಿ.ಪಾಟೀಲ, ಹುಲ್ಲನಗೌಡ ಹೊಸ ಗೌಡರ, ರೇಷ್ಮಾ ಪಾಟೀಲ, ಲಲಿತ ಕಲಾ ವಿವಿಯ ವಿಶೇಷಾಧಿಕಾರಿ ಡಾ.ಎಸ್.ಸಿ.ಪಾಟೀಲ ಆಗಮಿಸಲಿದ್ದಾರೆ ಎಂದರು.
ಹಂಡೆವಜೀರ ಸಮಾಜದ ೩೦ ಕ್ಕೂ ಹೆಚ್ಚಿನ ರಾಜ,ರಾಣಿಯರು ೩೦೦ಕ್ಕೂ ಹೆಚ್ಚು ವರ್ಷಗಳ ಕಾಲ ಸುದೀರ್ಘ ಕಾಲ ರಾಜಭಾರ ಮಾಡಿದ್ದಾರೆ. ಇವರಲ್ಲಿ ವಿಜಯಪುರದ ಹನಮಪ್ಪ ನಾಯಕ ಅವರು ಸುದೀರ್ಘ ಆಡಳಿತ ನಡೆಸಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಚಾಲುಕ್ಯರ ಪರಂಪರೆಯೊಂದಿಗೆ ಸಂಬಂಧ ಹೊಂದಿರುವುದು ಶಾಸನಗಳಿಂದ ತಿಳಿದು ಬರುತ್ತದೆ. ಮೂಲತಃ ಶೈವಾರಾಧಕರಾಗಿ ನಂತರ ವೀರಶೈವರಾದರು ಎಂದು ವಿವರಿಸಿದರು.
ಮುಖಂಡರಾದ ಬಿ.ಕೆ.ಪಾಟೀಲ, ಎಸ್.ಎಸ್.ಪಾಟೀಲ, ವಿ.ಕೆ.ಪಾಟೀಲ, ಎಸ್.ಎನ್.ಪಾಟೀಲ, ಆರ್.ಎಸ್.ಪಾಟೀಲ, ದೇವೇಂದ್ರ ಗೋನಾಳ ಉಪಸ್ಥಿತರಿದ್ದರು.