ನ.2ರಂದು ಜಿಲ್ಲಾ ಮಟ್ಟದ ಕವಿಗೋಷ್ಠಿ

Published on

ಬೇಲೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಮಟ್ಟದ ಕವಿಗೋಷ್ಠಿ ಹಾಗೂ ಗೀತಗಾಯನ ಸ್ಪರ್ಧೆಯನ್ನು ನವೆಂಬರ್ 2ರಂದು ತಾಲೂಕಿನ ಹಲ್ಮಿಡಿ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಬರಹಗಾರರ ಸಂಘದ ಜಿಲ್ಲಾಧ್ಯಕ್ಷ ಡಿ.ಸುಂದರೇಶ್ ಹೇಳಿದರು.

ಕನ್ನಡ ರಾಜ್ಯೋತ್ಸವದ ಸಾಂಸ್ಕೃತಿಕ ಸಂಭ್ರಮಕ್ಕೆ ಹೊಸ ಬಣ್ಣ ತುಂಬುವ ಪ್ರಯತ್ನವಾಗಿ ಹಾಸನ ಜಿಲ್ಲಾ ಬರಹಗಾರರ ಸಂಘವು ಜಿಲ್ಲಾ ಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದೆ. ಸಂಘವು ಐದು ವರ್ಷಗಳಿಂದ ನಿರಂತರವಾಗಿ ಕವಿ ಗೋಷ್ಠಿಗಳೊಂದಿಗೆ ಬರಹಗಾರರು, ಕವಿಗಳು, ಕಲಾವಿದರು, ಸಾಹಿತ್ಯಾಸಕ್ತರನ್ನು ಒಂದೇ ವೇದಿಕೆಯಲ್ಲಿ ಕರೆತರುತ್ತಿದ್ದೇವೆ. ಪ್ರತಿವರ್ಷ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸುವುದು ಹಾಗೂ ಕನ್ನಡ ಸಾಹಿತ್ಯಾಭಿಮಾನವನ್ನು ಬೆಳೆಸುವುದು ನಮ್ಮ ಉದ್ದೇಶವಾಗಿದೆ. ಈಗಾಗಲೇ ಸಂಘದಿಂದ 700ಕ್ಕೂ ಹೆಚ್ಚು ಕವಿಗಳು, ಸಾಹಿತಿಗಳು, ಶಿಕ್ಷಕರು, ಕಲಾವಿದರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿದ್ದೇವೆ ಎಂದರು.

ಸಂಘದ ಜಿಲ್ಲಾ ಗೌರವಾಧ್ಯಕ್ಷ ವೆಂಕಟೇಶ್ ಮಾತನಾಡಿ, ಕವಿಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಈ ಮೂಲಕ ಕನ್ನಡದ ಶ್ರೇಷ್ಠತೆ ಹಾಗೂ ಪರಂಪರೆಯನ್ನು ಮುಂದಿನ ತಲೆಮಾರಿಗೆ ತಲುಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಅಂದು ಕವಿಗಾಯನ, ಕಲಾಕುಂಚ, ಸಂಗೀತ ಕಾರ್ಯಕ್ರಮ, ಸಾಹಿತ್ಯ ಚರ್ಚೆ ಮತ್ತು ಕವಿತಾ ವಿಮರ್ಶೆಗಳು ಒಂದೇ ವೇದಿಕೆಯಲ್ಲಿ ನಡೆಯಲಿವೆ. ಜನಪದ ಕಲೆಗಳು, ನುಡಿ ನಮನ, ಕನ್ನಡ ಗೀತೆ ಗಾಯನ ಹಾಗೂ ರಾಜ್ಯೋತ್ಸವ ಗೀತೆಯ ಸಂಯೋಜಿತ ಪ್ರದರ್ಶನ ನಡೆಯಲಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಸುಮಾರು 100ಕ್ಕೂ ಹೆಚ್ಚು ಕವಿಗಳು, ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಸಂಘದ ಹಿರಿಯ ಸಲಹೆಗಾರ ಚನ್ನೇಗೌಡ, ಜಿಲ್ಲಾ ಕಾರ್ಯದರ್ಶಿ ದಿಬ್ಬೂರು ರಮೇಶ್, ಡಾ.ರಾಜ್‌ಕುಮಾರ್ ಸಂಘದ ಅಧ್ಯಕ್ಷ ತೀರ್ಥಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net