ನ.11 ರಂದು ರಸ್ತಾ ರೋಕೊ

Oplus_131072
Oplus_131072
Published on

ಬಾಗಲಕೋಟೆ: ‘ವಕ್ಫ್‌ ಹೆಸರಿನಲ್ಲಿ ರೈತರ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ ನಡೆ ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ವತಿಯಿಂದ ನ.11 ರಂದು ಬಾಗಲಕೋಟೆ ಸೇರಿದಂತೆ ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಮೂರು ಗಂಟೆಗಳ ಕಾಲ ರಸ್ತಾ ರೋಕೊ ಮಾಡಲಾಗುವುದು’ ಎಂದು ಬಜರಂಗ ದಳ ರಾಜ್ಯ ಸಂಯೋಜಕ ಪುಂಡಲೀಕ ದಳವಾಯಿ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಹಣಿಯ 11ನೇ ಕಾಲಂ ನಲ್ಲಿ ವಕ್ಫ್‌ ಎಂದು ಬರೆದಿರುವುದನ್ನು ಯಾವುದೇ ಷರತ್ತಿಲ್ಲದೆ ತೆಗೆದು, ಮಾಲೀಕರ ಹೆಸರು ಮಾತ್ರ ಉಳಿಸಬೇಕು’ ಎಂದು ಆಗ್ರಹಿಸಿದರು.

‘ಮೊದಲಿನಿಂದಲೂ ನಾವು ಲವ್ ಜಿಹಾದ್ ಬಗ್ಗೆ ಹೇಳಿಕೊಂಡು ಬಂದಿದ್ದೇವೆ. ಈಗ ಸರ್ಕಾರ ವಕ್ಫ್‌ ಹೆಸರಿನಲ್ಲಿ ಲ್ಯಾಂಡ್‌ ಜಿಹಾದ್ ಮಾಡುತ್ತಿದೆ. ಇದನ್ನು ವಿರೋಧಿಸಿ ನ್ಯಾಯ ಸಿಗುವವರೆಗೆ ಹೋರಾಟ ಮಾಡುತ್ತೇವೆ’ ಎಂದು ಹೇಳಿದರು.

‘ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ರೈತರ, ಮಠಗಳ ಆಸ್ತಿಗಳನ್ನು ವಕ್ಫ್‌ಗೆ ಸೇರಿಸುವ ಹುನ್ನಾರ ನಡೆದಿದೆ. ಮುಸ್ಲಿಂರಿಗೆ ನೇರವಾಗಿ ನೀಡದೆ ವಕ್ಫ್ ಹೆಸರಿನಲ್ಲಿ ಅತಿಕ್ರಮಣ ಮಾಡಲಾಗುತ್ತಿದೆ. ಸೂಕ್ತ ದಾಖಲೆಗಳನ್ನು ನೀಡಿದರೂ ಕಂದಾಯ ಇಲಾಖೆ ಅಧಿಕಾರಿಗಳು ತಿದ್ದುಪಡಿ ಮಾಡುತ್ತಿಲ್ಲ’ ಎಂದು ದೂರಿದರು.

‘ಹಿಂದೂ ಸಮಾಜವನ್ನು ಹೀಯಾಳಿಸುತ್ತಿರುವ ಸಚಿವ ಜಮೀರ್ ಅಹ್ಮದ್ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು. ಯಾವುದೇ ಕಾರಣಕ್ಕೂ ರೈತರು ಹೆದರಬಾರದು. ಸರ್ಕಾರದ ವಿರುದ್ಧ ನಿಮ್ಮ ಜತೆಗೆ ಹೋರಾಟ ಮಾಡಲು ಸಿದ್ಧರಿದ್ದೇವೆ’ ಎಂದು ಹೇಳಿದರು.

ಮುಖಂಡರಾದ ಗಂಗಾಧರ ಮುರನಾಳ, ಶಿವಕುಮಾರ ಮೇಲ್ನಾಡ, ದೇವದತ್ತ ಬಡಿಗೇರ, ಕೃಷ್ಣಾ ರಾಜೂರ, ರಾಘವೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net