

ಕಂಪಲಾಪುರ: ಧ್ವನಿ ಇಲ್ಲದ ಸಮಾಜಕ್ಕೆ ಧ್ವನಿಯಾದವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಪಿರಿಯಾಪಟ್ಟಣ ಡಾ.ಅಂಬೇಡ್ಕರ್ ವಸತಿ ಶಾಲೆ ಶಿಕ್ಷಕ ಪುಟ್ಟಮಾದಯ್ಯ ಹೇಳಿದರು.
ಗ್ರಾಮದ ಜೈ ಭೀಮ್ ಯುವಸೇನೆ ಹಾಗೂ ಗ್ರಾಮಸ್ಥರು ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.
ನಾವೆಲ್ಲ ಸುರಕ್ಷಿತವಾಗಿ ಬದುಕು ಸಾಗಿಸುತ್ತಿದ್ದೇವೆ ಎಂದರೆ ಅದಕ್ಕೆ ಮೂಲ ಕಾರಣ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ. ಅದು ನಮಗೆಲ್ಲ ವರದಾನವಾಗಿದೆ ಎಂದರು.
ಇಂದು ಸರ್ಕಾರಿ ಕಚೇರಿಗಳಲ್ಲೇ ಜಾತಿ ವ್ಯವಸ್ಥೆ ತಾಂಡವವಾಡುತ್ತಿದೆ. ಅದು ತೊಲಗಬೇಕು. ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಪತ್ರಕರ್ತ ಸದಾಶಿವ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದರೂ ದೇಶದಲ್ಲಿ ಆಗಿಂದಾಗ್ಗೆ ಕೊಲೆ, ಅತ್ಯಾಚಾರ, ವಂಚನೆ ಪ್ರಕರಣಗಳು ನಡೆಯುತ್ತಿವೆ. ಒಂದುವೇಳೆ ಸಂವಿಧಾನ ರಚಿಸದೆ ಹೋಗಿದ್ದರೆ ದೇಶ ಅಲ್ಲೋಲ ಕಲ್ಲೋಲವಾಗುತ್ತಿತ್ತು. ಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ, ಮಹಾನ್ ಶಕ್ತಿ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷೆ ಜಾನಕಿ ವೆಂಕಟರಾಮು, ಯಜಮಾನ್ ತಮ್ಮಯ್ಯ, ಚಿಕ್ಕ ಯಜಮಾನ್ ವೈರಮುಡಿ, ರಾಮು, ರವಿ, ಜಯರಾಮ್, ರೋಹಿತ್, ಜೈ ಭೀಮ್ ಯುವಸೇನೆ ಗೌರವಾಧ್ಯಕ್ಷ ಗಣೇಶ್, ಅಧ್ಯಕ್ಷ ಕಾರ್ತಿಕ್, ಉಪಾಧ್ಯಕ್ಷ ಚಂದನ್ ಪ್ರಸಾದ್ ಹಾಗೂ ಜೈ ಭೀಮ್ ಯುವಸೇನೆ ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು .
ಸಂಜೆ ಅಲಂಕೃತ ಮಂಟಪದಲ್ಲಿ ಅಂಬೇಡ್ಕರ್ ಅವರ ಬೃಹತ್ ಭಾವಚಿತ್ರವನ್ನಿಟ್ಟು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.