ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ

Published on

ಚನ್ನರಾಯಪಟ್ಟಣ: ಧರ್ಮಸ್ಥಳದ ಹೆಸರಿಗೆ ಚ್ಯುತಿ ತರಲು ಹಾಗೂ ಹಿಂದು ಧರ್ಮವನ್ನು ಹತ್ತಿಕ್ಕುವ ಷಡ್ಯಂತ್ರ ನಡೆಯುತ್ತಿದೆ ಎಂದು ದೀಕ್ಷಿತ್ ಪ್ರತಿಷ್ಠಾನಮ್ ಅಧ್ಯಕ್ಷ ಡಾ.ಎಂ.ಎಸ್.ವಿಶ್ವನಾಥ ದೀಕ್ಷಿತ್ ಆರೋಪಿಸಿದರು.

ಹಿಂದುಗಳ ಅಸ್ಮಿತೆ, ಶ್ರದ್ಧಾ ಭಕ್ತಿ ಕೇಂದ್ರವಾಗಿರುವ ಶ್ರೀ ಕ್ಷೇತ್ರದ ರಕ್ಷಣೆಗೆ ದೀಕ್ಷಿತ್ ಪ್ರತಿಷ್ಠಾನಮ್ ಸದಾ ಬೆಂಬಲ ನೀಡುತ್ತದೆ. ಎರಡು ವರ್ಷಗಳಿಂದ ನಡೆಯುತ್ತಿರುವ ಸೌಜನ್ಯಾ ಪ್ರಕರಣ ಸೇರಿ ಕೊಲೆ, ಅತ್ಯಾಚಾರ ಕುರಿತು ಧರ್ಮಸ್ಥಳ ಹಾಗೂ ವಿರೇಂದ್ರ ಹೆಗ್ಗಡೆ ಅವರ ಕುಟುಂಬದ ಮೇಲೆ ಷಡ್ಯಂತ್ರ ನಡೆಸಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇಲ್ಲಸಲ್ಲದ ಸುಳ್ಳು ಆರೋಪ, ಧರ್ಮ ನಿಂದನೆ ಮೂಲಕ ಜನರ ಭಾವನೆಗೆ ಧಕ್ಕೆ ತರಲಾಗುತ್ತಿದೆ. ಧರ್ಮಸ್ಥಳದ ಬಗ್ಗೆ ಹಗುರವಾಗಿ ಮಾತಾಡುವುದು, ಧಾರ್ಮಿಕವಾಗಿ ಹಿಂದು ಧರ್ಮ ನಿಂದನೆಯಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಧರ್ಮಸ್ಥಳದ ಮಂಜುನಾಥಸ್ವಾಮಿ ಹಾಗೂ ಅಣ್ಣಪ್ಪಸ್ವಾಮಿ ದೇಗುಲಕ್ಕೆ 8 ಶತಮಾನಗಳ ಇತಿಹಾಸವಿದೆ. ಕ್ಷೇತ್ರಕ್ಕೆ ರಾಜ್ಯ, ಹೊರರಾಜ್ಯದ ಸಾವಿರಾರು ಭಕ್ತರು ನಿತ್ಯ ಭೇಟಿ ನೀಡುತ್ತಿದ್ದಾರೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಸಾವಿರಾರು ಕೆರೆಗಳ ಅಭಿವೃದ್ಧಿ, ಮಹಿಳಾ ಸಬಲೀಕರಣ, ವೃದ್ಧರಿಗೆ ಮಾಸಾಶನ, ಸ್ವಾವಲಂಬಿ ಮಹಿಳಾ ಉದ್ಯೋಗಕ್ಕಾಗಿ ಸಾಲ-ಸೌಲಭ್ಯ, ಉಪಕರಣಗಳ ವಿತರಣೆ ಹಾಗೂ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ಇಂದು ನೆಮ್ಮದಿಯಾಗಿ ಜೀವನ ನಡೆಸುತ್ತಿರುವುದರ ಹಿಂದೆ ವೀರೇಂದ್ರ ಹೆಗ್ಗಡೆ ಅವರ ಪಾತ್ರ ದೊಡ್ಡದಿದೆ. ಶ್ರೀಕ್ಷೇತ್ರದಿಂದ ರಾಜ್ಯದಾದ್ಯಂತ ಸುಮಾರು 55 ಲಕ್ಷ ಕುಟುಂಬಗಳು ಆಸರೆ ಪಡೆದುಕೊಂಡಿವೆ. ಪಿತೂರಿ ಹಿಂದೆ ಯಾರಿದ್ದಾರೆ ಎಂದು ತನಿಖೆ ಮೂಲಕ ಸತ್ಯ ಹೊರತರಬೇಕಿದೆ. ದೇಶದಲ್ಲಿ ಹಿಂದು ಧರ್ಮವಿರುವವರೆಗೂ ಶ್ರೀ ಕ್ಷೇತ್ರವನ್ನು ಕಸಿಯಲು ಸಾಧ್ಯವಿಲ್ಲ. ಇವರ ಬಗ್ಗೆ ಸುಳ್ಳು ಆರೋಪಗಳನ್ನು ಹೊರಿಸಿ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಇದರಿಂದ ಕ್ಷೇತ್ರದ ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಈ ಪ್ರಯತ್ನ ಕೈಗೂಡುವುದಿಲ್ಲ. ಧಾರ್ಮಿಕ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತರುತ್ತಿರುವ ಕುರಿತು ತನಿಖೆ ಕೈಗೊಳ್ಳಬೇಕು. ಅಪಪ್ರಚಾರ ಮಾಡುತ್ತಿರುವ ವ್ಯಕ್ತಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ದೀಕ್ಷಿತ್ ಪ್ರತಿಷ್ಠಾನಮ್ನ ಕಾರ್ಯಾಧ್ಯಕ್ಷ ಸತೀಶ್ ಕಾಚೇನಹಳ್ಳಿ, ಉಪಾಧ್ಯಕ್ಷರಾದ ನಾಗೇಂದ್ರ, ಸಿ.ಎನ್.ದೀಪು, ನಿರ್ದೇಶಕರಾದ ನಂದಕುಮಾರ್, ಮಹೇಶ್, ಸಿ.ಎಸ್.ಹರ್ಷ, ತೇಜಸ್‌ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net