ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರಕ್ಕೆ ಸಿಡಿದೆದ್ದ ಭಕ್ತರು

bkt-13-19
ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಬುಧವಾರ ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಧರ್ಮಸ್ಥಳ ಭಕ್ತಾಭಿಮಾನಿಗಳ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
Published on

ಬಾಗಲಕೋಟೆ: ಪವಿತ್ರವಾದ ಧರ್ಮಸ್ಥಳ ಮಂಜುನಾಥನ ದೇವಸ್ಥಾನ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನಗರದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿಗಳ ಸಮಿತಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಬಾಬು ಜಗಜೀವನರಾಂ ಮುಂಭಾಗದ ರಸ್ತೆಯಿಂದ ಆರಂಭಗೊAಡ ಪ್ರತಿಭಟನಾ ಮೆರವಣಿಗೆ ನವನಗರದ ಪ್ರಮುಖ ರಸ್ತೆಗಳಲ್ಲಿ ಹಾಯ್ದು ಜಿಲ್ಲಾ ಆಡಳಿತ ಭವನದ ಗೇಟ್‌ವರೆಗೆ ನಡೆಯಿತು. ಧರ್ಮಸ್ಥಳ ಕುರಿತು ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಪ್ರತಿಭಟನೆಯಲ್ಲಿ ಘೋಷಣೆಗಳನ್ನು ಕೂಗಲಾಯಿತು.

ನಂತರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ವೀರಣ್ಣ ಚರಂತಿಮಠ, ಹಿಂದುಳು ನಡೆದುಕೊಳ್ಳುವ ಪವಿತ್ರ ಧರ್ಮಸ್ಥಳ ಮಂಜುನಾಥನ ಕುರಿತು ಅವಹೇಳನಕಾರಿಯಾಗಿ ಮಾತನಾಡುವುದು ಹಾಗೂ ಅಪಪ್ರಚಾರ ಮಾಡುವ ಷಡ್ಯಂತ್ರ ನಡೆದಿದೆ ಎಂದು ಕಿಡಿಕಾರಿದರು.

ಹಿಂದುಗಳ ಶ್ರದ್ಧಾ ಕೇಂದ್ರಗಳನ್ನು ಹಾಳು ಮಾಡಲು ಕೆಲವರು ಇರುತ್ತಾರೆ. ಹಿಂದು ಧರ್ಮವನ್ನು ರಕ್ಷಿಸಲೆಂದೇ ಕೇಂದ್ರದಲ್ಲಿ ಸರ್ಕಾರವಿದೆ. ಇಷ್ಟಾದರೂ ರಾಜ್ಯದಲ್ಲಿ ಕೆಲವರು ಆ ಕ್ಷೇತ್ರವನ್ನು ಹಾಳು ಮಾಡಲು ಹೊರಟಿರುವುದು ಖಂಡನೀಯ ಎಂದರು.

೧೩ ತಗ್ಗು ಅಗೆದರೂ ಒಂದು ಸಾಕ್ಷ್ಯ ಸಿಗುತ್ತಿಲ್ಲ. ಇದರಿಂದ ಏನು ಸಾಧನೆ ಮಾಡಲು ಸರ್ಕಾರ ಹೊರಟಿದೆ? ಯಾರೋ ಒಬ್ಬ ಮುಸುಕುದಾರಿ ಹೇಳಿದ ಕೂಡಲೇ ಎಸ್‌ಐಟಿ ರಚಿಸಿ ತನಿಖೆ ಮಾಡುತ್ತಿರುವುದು ವಿಪರ್ಯಾಸ ಎಂದು ತಿಳಿಸಿದರು.

ನಾಡಿನ ಲಕ್ಷಾಂತರ ಭಕ್ತರು ಧರ್ಮಸ್ಥಳ ಮಂಜುನಾಥನಿಗೆ ನಡೆದುಕೊಳ್ಳುತ್ತಾರೆ. ಭಕ್ತಿಯಿಂದ ನಡೆದುಕೊಳ್ಳುವ ದೇವಸ್ಥಾನಕ್ಕೆ ಕಲ್ಲು ಹಾಕುವ ಕೆಲಸ ಮಾಡಬೇಡಿ. ಗಿರೀಶ ಮಟ್ಟಣ್ಣವರ, ಸಮೀರ್ ಎಂ.ಡಿ, ಸಂತೋಷ ಶೆಟ್ಟಿ ಇಂತಹವರ ತಂಡ ದೇವಸ್ಥಾನಗಳ ಮೇಲೆ ಪ್ರಹಾರ ಮಾಡುತ್ತಿದ್ದಾರೆ ಇದು ಒಳ್ಳೆಯದಲ್ಲ ಎಂದು ಎಚ್ಚರಿಕೆ ನೀಡಿದರು.

ಧರ್ಮಸ್ಥಳ ಕುರಿತು ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಬೇಕು. ತನಿಖೆಯ ನೆಪದಲ್ಲಿ ಕ್ಷೇತ್ರಕ್ಕೆ ಧಕ್ಕೆ ತರುವ ಕೆಲವರ ಮೇಲೆ ಕ್ರಮ ಆಗಲಿ, ಧರ್ಮಸ್ಥಳ ಆಯಿತು ಈಗ ಮಂತ್ರಾಲಯದ ರಾಯರ ಮಠವನ್ನು ಕೂಡ ಟಾರ್ಗೆಟ್ ಮಾಡಲಾಗುತ್ತಿದೆ. ಹಿಂದು ದೇವಾಲಯ ಕುರಿತು ಅಪಪ್ರಚಾರ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಧರ್ಮಸ್ಥಳ ಭಕ್ತಾಭಿಮಾನಿಗಳ ಸಮಿತಿ ಮುಖಂಡ ರಾಜು ನಾಯ್ಕರ ಮಾತನಾಡಿ, ಸರ್ಕಾರ ಮಾಡದ್ದನ್ನು ೪೦ಕ್ಕೂ ಹೆಚ್ಚು ಜನಪರ ಯೋಜನೆಗಳನ್ನು ಬಡವರ ಮನೆ ಮನೆಗೆ ತಲುಪಿಸುವ ಕೆಲಸವನ್ನು ವೀರೇಂದ್ರ ಹೆಗಡೆಯವರ ನೇತೃತ್ವದಲ್ಲಿ ಮಾಡಲಾಗಿದೆ.ಇಂತಹ ಪುಣ್ಯಾತ್ಮ ಹಾಗೂ ಧರ್ಮಸ್ಥಳ ಮಂಜುನಾಥ ದೇವಸ್ಥಾನಕ್ಕೆ ಕಳಂಕ ತರಲು ಗಿರೀಶ ಮೆಟ್ಟಣ್ಣವರ ನೇತೃತ್ವದ ನಾಸ್ತಿಕ ತಂಡ ಅಪಪ್ರಚಾರ ಮಾಡುತ್ತಿದ್ದು ಇವರ ಮೇಲೆ ಕೇಸ್ ದಾಖಲಿಸಿಕೊಂಡು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅವಿವೇಕಿ ಅನಾಮಿಕ ಮಾತನ್ನು ಕೇಳಿ ಎಸ್‌ಐಟಿ ತನಿಖೆ ನಡೆಸುತ್ತಿದೆ. ಆದರೆ ಸೌಜನ್ಯಗೆ ನ್ಯಾಯ ಸಿಗಬೇಕು ಎನ್ನುವುದಕ್ಕೆ ನಮ್ಮದೂ ಬೆಂಬಲ ಇದೆ. ಆದರೆ ಹಿಂದುಗಳ ಶ್ರದ್ಧಾ ಕೇಂದ್ರವಾಗಿರುವ ಧರ್ಮಸ್ಥಳ ಕುರಿತು ಸಾಮಾಜಿಕ ಮಾಧ್ಯಮಗಳ ಮೂಲಕ ಅಪಪ್ರಚಾರ ಮಾಡುತ್ತಿರುವರ ಮೇಲೆ ಕೂಡಲೇ ಸರ್ಕಾರ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.

ಮುಖಂಡ ಶ್ರೀಶೈಲ ಪಾಟೀಲ ಡಾ.ಕಿತ್ತಲಿ ಮಾತನಾಡಿದರು. ಡಾ.ಎಂ.ಎಸ್.ದಡ್ಡೇನವರ, ಶ್ರೀಕಾಂತ ಸಂಽಮನಿ, ಮಲ್ಲಪ್ಪ ಕಿತ್ತಲಿ, ರಮೇಶ ಹಾದಿಮನಿ, ರಂಗನಗೌಡ ದಂಡಣ್ಣವರ, ಹನಮಂತ ಸುಕಾಲಿ, ಹನಮಂತ ಹೊಸಕೋಟೆ, ಸಕ್ರಪ್ಪ ಹೂವಗಾರ, ರವೀಂದ್ರ ಒಂದಕುದರಿ, ಗೀತಾ ನಲವತ್ತವಾಡ, ಶಶಿಕಲಾ ಮಜ್ಜಗಿ, ಬಸವರಾಜ ಯಂಕAಚಿ, ಸತ್ಯನಾರಾಯಣ ಹೇಮಾದ್ರಿ, ಉಮೇಶ ಹಂಚಿನಾಳ, ರವಿ ಧಾಮಜಿ, ರಾಜು ಗಾಣಿಗೇರ, ಬಸವರಾಜ ಅವರಾದಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net