ಧರ್ಮದ ಕಾಲಂನಲ್ಲಿ ಬೌದ್ಧ ಧಮ್ಮವೆಂದು ದಾಖಲಿಸಿ

04 oct tnp 01
Published on

ತಿ.ನರಸೀಪುರ: ಜಾತಿಯತೆ ಮತ್ತು ಅಸ್ಪಶ್ಯತೆ ಮುಕ್ತ ಪ್ರಬುದ್ಧ ಭಾರತದ ನಿರ್ಮಾಣಕ್ಕಾಗಿ ಪ.ಜಾತಿ ಮತ್ತು ಪಂಗಡದ ಸಮುದಾಯಗಳ ಜಾತಿ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಬೌದ್ಧ ಧಮ್ಮವೆಂದು ದಾಖಲಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮ ವಾದ)ಜಿಲ್ಲಾ ಸಂಘಟನಾ ಸಂಚಾಲಕ ಕೆಂಪಯ್ಯನಹುಂಡಿ ರಾಜು ಮನವಿ ಮಾಡಿದರು.

ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಭಾನುವಾರ ಅಖಿಲ ಕರ್ನಾಟಕ ಬೌದ್ಧ ದಾಖಲಾತಿ ಆಂದೋಲನ ಸಮಿತಿಯ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಇಲಾಖೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಜನಗಣತಿಯಲ್ಲಿ ಶೋಷಿತ ದಲಿತ ಸಮುದಾಯಗಳು ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮವನ್ನು ಬರೆಸಬೇಕು ಎಂದರು.

ಜಗತ್ತಿಗೆ ಗೌತಮ ಬುದ್ಧ ಹಾಗೂ ಬೌದ್ಧ ಧರ್ಮವನ್ನು ಬಳುವಳಿಯಾಗಿ ನೀಡಿರುವ ಭಾರತದಲ್ಲಿ ಧಮ್ಮದ ಮರು ಸ್ಥಾಪನೆಗಾಗಿ ನನ್ನ ಜನರು ಸಿದ್ಧರಿದ್ದಾರೆ ಎಂಬ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನಂಬಿಕೆಯನ್ನು ಇಟ್ಟಿರುವ ಉಳಿದುಕೊಂಡು ಗೌರವಿಸಬೇಕು. ಆದ್ದರಿಂದ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಸಮಸ್ತ ದಲಿತ ಸಮುದಾಯ ಬೌದ್ಧ ದಾಖಲಾತಿ ಆಂದೋಲನವನ್ನು ಯಶಸ್ವಿಗೊಳಿಸಬೇಕೆಂದು ಕಂಪಯ್ಯನಹುಂಡಿ ರಾಜು ಮನವಿ ಮಾಡಿದರು.

ಜಿಲ್ಲಾ ಸಮಿತಿ ಸದಸ್ಯ ಕನ್ನಾಯಕನಹಳ್ಳಿ ಮರಿಸ್ವಾಮಿ ಮಾತನಾಡಿ, ರಾಜ್ಯದಾದ್ಯಂತ ಬೌದ್ಧ ಧರ್ಮ ದಾಖಲಾತಿ ಆಂದೋಲನವನ್ನು ಅಖಿಲ ಕರ್ನಾಟಕ ಬೌದ್ಧ ದಾಖಲಾತಿ ಆಂದೋಲನ ಸಮಿತಿ ಆರಂಭಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಂಬಲಿಸಿ ಜಾಗೃತಿ ಮೂಡಿಸುವ ಕಾರ್ಯದ ಭಾಗವಾಗಿ ಇಂದು ಕರಪತ್ರಗಳನ್ನು ಬಿಡುಗಡೆ ಮಾಡುತ್ತಿದ್ದೇವೆ. ಬೌದ್ಧ ಧರ್ಮದ ಮೂಲವೇ ಭಾರತವಾಗಿರುವುದರಿಂದ ಈ ದೇಶದ ಮೂಲ ನಿವಾಸಿಗಳು ಧರ್ಮದ ಕಾಲಮ್‌ನಲ್ಲಿ ಬೌದ್ಧ ಎಂದು ನಮೂದಿಸಬೇಕೆಂದು ತಿಳಿಸಿದರು.

ತಾಲೂಕು ಸಂಚಾಲಕ ನೆರಗ್ಯಾತನಹಳ್ಳಿ ಮನೋಜ್ ಕುಮಾರ್, ಸಂಘಟನಾ ಸಂಚಾಲಕರಾದ ಗೋವಿಂದರಾಜು, ರಾಚಪ್ಪ, ಕುಮಾರ ನಿಲಸೋಗೆ, ಪ್ರಸನ್ನ ಹಾಗೂ ಅರ್ಜುನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net