ಧರ್ಮದ ಕಡೆಗೆ ಸಾಗುತ್ತಿದೆ ಸಮಾಜ

6HLY-1(A)
????????????????????????????????????
Published on

ಹಳಿಯಾಳ: ಬೇಡುವವರಿಲ್ಲದ ಕಲ್ಯಾಣ ರಾಜ್ಯವನ್ನು ಅಂದು ಬಸವಣ್ಣನವರು ಕಟ್ಟಿದ್ದರು. ಇಂದು ಇಂತಹ ದಾಸೋಹ ಕಾರ್ಯಗಳ ಮೂಲಕ ಮತ್ತೆ ಸಮಾಜವು ಧರ್ಮದ ಕಡೆಗೆ ಸಾಗುತ್ತಿದೆ. ಮುಂದೆ ಸುಭೀಕ್ಷ ಕಾಲ ಬರುವುದೆಂಬ ಭರವಸೆ ನಮ್ಮದಾಗಬೇಕು ಎಂದು ಮಾಜಿ ಸಂಸದ ಪ್ರೊ.ಐ.ಜಿ. ಸನದಿ ಹೇಳಿದರು.

ಉಳವಿ ಯಾತ್ರಾರ್ಥಿಗಳಿಗಾಗಿ ಪಟ್ಟಣದಲ್ಲಿ ಬುಧವಾರದಿಂದ ಆರಂಭಿಸಿದ ಅನ್ನದಾಸೋಹ ಕೇಂದ್ರದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಾಜಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಬಸವಣ್ಣನವರು ಕಾಯಕವೇ ಕೈಲಾಸವೆಂದು ಸಾರಿದ್ದಾರೆ. ಕಾಯಕ-ದಾಸೋಹ ಎಲ್ಲಿ ಇರುತ್ತದೆಯೋ ಅಲ್ಲಿ ಯಾವ ಕೊರತೆಯೂ ಇರುವುದಿಲ್ಲ ಎಂದರು.

ಸಾನ್ನಿಧ್ಯ ವಹಿಸಿದ್ದ ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಮರಗಳು, ಹಸುಗಳು, ನದಿಗಳು ಪ್ರತಿಫಲಾಪೇಕ್ಷೆ ಇಲ್ಲದೆ ಪರೋಪಕಾರ ಮಾಡುತ್ತವೆ. ಆದರೆ, ಮಾನವರಾದ ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕಿದೆ. ಉಳವಿ ಭಕ್ತರಿಗೆ ತ್ರಿಕಾಲ ದಾಸೋಹದ ವ್ಯವಸ್ಥೆಯನ್ನು ಅಂದೇ ಪೂಜ್ಯ ಮೃತ್ಯುಂಜಯಪ್ಪಗಳು ಮಾಡಿದ್ದಾರೆ. ನಿಗದಿ, ಹಳಿಯಾಳ, ದಾಂಡೇಲಿ ಮುಂದೆ ಉಳವಿಯಲ್ಲಿಯೂ ಸ್ವತಃ ಅವರೆ ನಿಂತು ಮೂರು ದಿನ ದಾಸೋಹ ಸೇವೆ ನೆರವೇರಿಸುತ್ತಿದ್ದರು. ಅವರ ಇಚ್ಛೆ ಇಂದು ಈಡೇರಿದೆ ಎಂದರು.

ಹಳಿಯಾಳ ಬಸವಕೇಂದ್ರದ ಅಧ್ಯಕ್ಷ ಚಂದ್ರಕಾಂತ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಹಳಿಯಾಳದ ಅ.ಭಾ.ವೀ. ಮಹಾಸಭೆಯ ಜಿಲ್ಲಾಧ್ಯಕ್ಷ ಶ್ರೀಕಾಂತ ಹೂಲಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ ಮಾತನಾಡಿದರು.

ಹು-ಧಾ ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರಕಾಶ ಘಾಟಗೆ, ಫಕೀರಪ್ಪ ನಡುಮನಿ, ಶಿವಾನಂದ ಲೋಲೆನ್ನವರ, ರವಿ ಕಗ್ಗಣ್ಣವರ, ಉಮೇಶ ಕಟಗಿ, ಶಿವಾನಂದ ದೇವಗಿರಿ, ಪತ್ರಕರ್ತೆ ಸುಮಂಗಲಾ ಅಂಗಡಿ ಉಪಸ್ಥಿತರಿದ್ದರು.

ಸಂದೇಶ ಗಾರ್ಡನ್​ನಲ್ಲಿ ವ್ಯವಸ್ಥೆ

ಉಳವಿ ಜಾತ್ರೆಗೆ ರಾಜ್ಯ, ಹೊರರಾಜ್ಯದ ವಿವಿಧೆಡೆಯಿಂದ ಯಾತ್ರಾರ್ಥಿಗಳು ಒಂದು ವಾರ ಮೊದಲೇ ಚಕ್ಕಡಿ, ಟ್ರ್ಯಾಕ್ಟರ್, ಪಾದಯಾತ್ರೆ ಮೂಲಕ ಬರುತ್ತಾರೆ. ಅಂತಹ ಭಕ್ತಾದಿಗಳಿಗೆ ಮಾರ್ಗಮಧ್ಯದಲ್ಲಿ ಪ್ರಸಾದ ವ್ಯವಸ್ಥೆಯನ್ನು ಹಳಿಯಾಳದ ಅಂಗಡಿ ಗ್ಯಾಸ್ ಸರ್ವಿಸ್ ಪಕ್ಕದ ಸಂದೇಶ ಗಾರ್ಡನ್​ನಲ್ಲಿ ಧಾರವಾಡದ ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಶಿವಾನಂದ ಚನ್ನಪ್ಪ ದೇವಗಿರಿ ಅವರು ಆರಂಭಿಸಿದ್ದಾರೆ. ಸಂಜು ಲಕಮನಹಳ್ಳಿ, ಉಮೇಶ ಕಟಗಿ, ಶಿವಪುತ್ರಪ್ಪ ಭಾವಿಕಟ್ಟಿ ಮತ್ತು ಧಾರವಾಡ ಹಳಿಯಾಳ ಬಸವಕೇಂದ್ರಗಳ ಸಹಯೋಗದಲ್ಲಿ ದಾಸೋಹ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net