

ನಾಗಮಂಗಲ: ತಾಲೂಕಿನಲ್ಲಿ ಗೆದ್ದಿರುವವರು ನ್ಯಾಯಯುತ ಮತ್ತು ಕಾನೂನು ರೀತಿ ಆಡಳಿತ ನಡೆಸಿದರೆ ನನ್ನ ಬೆಂಬಲವಿರುತ್ತದೆ. ಅದನ್ನು ಬಿಟ್ಟು ದ್ವೇಷದ ರಾಜಕಾರಣ ಮಾಡಿದರೆ ವಿರೋಧ ಪಕ್ಷದವನಾಗಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದ ಮಾಜಿ ಶಾಸಕ ಸುರೇಶ್‌ಗೌಡ ಎಚ್ಚರಿಕೆ ನೀಡಿದರು.
ಪಟ್ಟಣದ ಗೃಹ ಕಚೇರಿಯ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಕೆಲವು ಷಡ್ಯಂತ್ರಗಳಿಂದ ವಿರೋಧಿಗಳು ಗೆದ್ದಿದ್ದಾರೆ. ಆದಾಗ್ಯೂ ಅವರನ್ನು ಅಭಿನಂದಿಸುತ್ತೇನೆ. ಆದರೆ ದ್ವೇಷದ ರಾಜಕಾರಣ ಆರಂಭಿಸಿದರೆ ನಾನು ಸುಮ್ಮನಿರುವವನಲ್ಲ ಎಂದು ಗುಡುಗಿದರು.
ನನ್ನ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಂತಿಯುತ ತಾಲೂಕನ್ನಾಗಿಸಿದ್ದೇನೆ. ಆದರೆ ಗೆದ್ದ ದಿನದಿಂದಲೇ ದ್ವೇಷದ ರಾಜಕಾರಣ ಮಾಡಲು ಮುಂದಾಗಿರುವ ಈಗಿನ ಶಾಸಕರು, ಕೂಡಲೇ ಅದನ್ನು ನಿಲ್ಲಿಸಬೇಕು. ನಾನು ನನ್ನ ಹಿತ, ಫಲವನ್ನು ಬಿಟ್ಟುಕೊಡುತ್ತೇನೆ. ಆದರೆ ನನ್ನ ಹಠವನ್ನು ಬಿಟ್ಟುಕೊಡುವವನಲ್ಲ ಎಂದರು.
ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಸುಳ್ಳು ಬಿಲ್ ಬರೆಸಿ ಅಕ್ರಮವೆಸಗಿರುವುದನ್ನು ವಿರೋಧಿಗಳು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದ ಸುರೇಶ್‌ಗೌಡ, ಪೊಲೀಸ್ ಸಿಬ್ಬಂದಿ ಯಾರ ಒತ್ತಡಕ್ಕೂ ಮಣಿಯದೆ ಕಾನೂನಾತ್ಮಕವಾಗಿ ಕರ್ತವ್ಯ ನಿರ್ವಹಿಸಬೇಕು. ಅಧಿಕಾರ ಎಂದಿಗೂ ಶಾಶ್ವತವಲ್ಲ. ಯಾರದೋ ಒತ್ತಡಕ್ಕೆ ಮಣಿದರೆ ನಿಮ್ಮ ಕೆಲಸ ಕಳೆದುಕೊಳ್ಳುತ್ತೀರಿ. ನನ್ನನ್ನು ಪೊಲೀಸ್ ಠಾಣೆವರೆಗೆ ಬರುವ ರೀತಿ ಮಾಡಿಕೊಳ್ಳದಿರಿ ಎಂದು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸೋಲಿನ ಸಂಪೂರ್ಣ ಹೊಣೆ ನಾನೇ ಹೊರುತ್ತೇನೆ. ನಮ್ಮ ಪಕ್ಷದವರು ವಿರೋಧಿಗಳ ಆಫರ್‌ಗೆ ಎಲ್ಲಿ ಬುಕ್ ಆಗಿದ್ದರು ಎಂಬುದು ನನಗೆ ಗೊತ್ತಿದೆ. ನಾನು ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತೇನೆ. ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಇರುವವರೆಗೂ ನಾನು ಜೆಡಿಎಸ್ ಪಕ್ಷದಲ್ಲಿಯೇ ನಿಷ್ಠಾವಂತನಾಗಿರುತ್ತೇನೆ ಎಂದರು.
ಗೆದ್ದ ನಂತರ ಅಧಿಕಾರಿಗಳ ಸಭೆ ನಡೆಸಿರುವ ಶಾಸಕರು, ತಾಲೂಕಿನಲ್ಲಿ ನನ್ನ ಅನುಮತಿ ಇಲ್ಲದೆ ಒಂದು ಕಡ್ಡಿಯೂ ಅಲುಗಾಡಕೂಡದೆಂದು ಅಧಿಕಾರಿಗಳಿಗೆ ಹೇಳಿದ್ದಾರೆ. ಎಲ್ಲ ಗುತ್ತಿಗೆದಾರರನ್ನು ಬಂದು ಭೇಟಿ ಮಾಡಿ ಎನ್ನುತ್ತಿರುವುದು ಏಕೆ? ಖಾಸಗಿ ಹೋಟೆಲ್‌ಗೆ ಬಂದು ಮಾತನಾಡಿ ಎನ್ನುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಕೆಲಸ ನಿಲ್ಲಿಸಿರುವ ಇಲಾಖೆಗಳ ಅಧಿಕಾರಿಗಳಿಗೆ 15 ದಿನ ಕಾಲಾವಕಾಶ ನೀಡುತ್ತೇನೆ. ಟೆಂಡರ್ ಆಗಿರುವ ಕೆಲಸ ಆರಂಭಿಸದಿದ್ದರೆ ಇಲಾಖೆಗಳಿಗೆ ನಾನೇ ಖುದ್ದು ಬರುತ್ತೇನೆ. ಆಗ ಕೆಲಸ ನಿಲ್ಲಿಸಲು ಕಾರಣ ಏನು ಎಂಬುದನ್ನು ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನ್ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು ಮಾತನಾಡಿ, ಶಾಸಕರು ದ್ವೇಷದ ರಾಜಕಾರಣ ಬಿಡಬೇಕು. ಒಳಸಂಚಿನಿಂದ ಜೆಡಿಎಸ್‌ಗೆ ಸೋಲಾಗಿದೆ. ಕೊಪ್ಪ ಹೋಬಳಿ ಜನತೆಗೆ ನಮ್ಮ ಪಕ್ಷ ಚಿರಋಣಿಯಾಗಿರಲಿದೆ. ಸೋಲನ್ನು ಮುಂದಿನ ಜಿ.ಪಂ., ತಾ.ಪಂ. ಚುನಾವಣೆಯ ಗೆಲುವಿಗೆ ಮೆಟ್ಟಿಲನ್ನಾಗಿ ಮಾಡಿಕೊಂಡು ಜೆಡಿಎಸ್ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸೋಣ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಮಾಜಿ ಶಾಸಕ ಸುರೇಶ್‌ಗೌಡರ ಪುತ್ರಿ ಧನ್ಯತಾ ಸುರೇಶ್‌ಗೌಡ ಮಾತನಾಡಿ, ಇದು ಕೇವಲ ಸುರೇಶ್‌ಗೌಡರ ಸೋಲಲ್ಲ. ಇದು ಇಡೀ ತಾಲೂಕಿನ ಜೆಡಿಎಸ್ ಕಾರ್ಯಕರ್ತರ ಸೋಲಾಗಿದೆ. ನಾವು ಸೋತಿರಬಹುದು. ಆದರೆ ನಾಗಮಂಗಲದ ಮನೆಯನ್ನು ನಮ್ಮ ತಂದೆ ಹಾಗೂ ನಾವು ಬಿಡುವುದಿಲ್ಲ. ಇಲ್ಲೇ ಇದ್ದು ಜನರ ಸೇವೆ ಮಾಡುವ ಜತೆಗೆ ಕಾರ್ಯಕರ್ತರ ಕಷ್ಟಸುಖಗಳಲ್ಲಿ ಭಾಗಿಯಾಗುತ್ತೇವೆ ಎಂದರು.
ಸಭೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ತಾಲೂಕು ಯುವ ಘಟಕದ ಅಧ್ಯಕ್ಷ ಪ್ರಶಾಂತ್, ಮುಖಂಡರಾದ ಗೌರೀಶ್, ಬುಲೇಟ್‌ರಾಜಣ್ಣ, ರಾಮಸ್ವಾಮೀಗೌಡ, ಯದುರಾಜು, ಜೈಶಂಕರ್, ರವಿಕುಮಾರ್, ಶಂಕರಲಿಂಗೇಗೌಡ ಮತ್ತಿತರರಿದ್ದರು.