ದ್ವಿದಳ ಧಾನ್ಯ ಬೆಳೆಗಳಿಗೆ ಜೀವಕಳೆ

IMG-20230726-WA0174
ದ್ವಿದಳ ಧಾನ್ಯ ಬೆಳೆಗಳಿಗೆ ಜೀವಕಳೆ
Published on

ಹೊಳೆನರಸೀಪುರ: ಕಳೆದ ಕೆಲವು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಅನ್ನದಾತರ ಮುಖದಲ್ಲಿ ಮಂದಹಾಸ ಚಿಗುರೊಡೆದಿದೆ.

ಪೂರ್ವ ಮುಂಗಾರಿನ ಕಣ್ಣಾಮುಚ್ಚಾಲೆ ಆಟದಿಂದ ಬೇಸತ್ತಿದ್ದ ರೈತರ ಪಾಲಿಗೆ ಪುಷ್ಯ ಮಳೆ ಸಂಜೀವಿನಿಯಾಗಿದೆ. ಪೂರ್ವ ಮುಂಗಾರಿನಲ್ಲಿ ರೈತರು ದ್ವಿದಳ ಧಾನ್ಯಗಳಾದ ಹಲಸಂದೆ, ಎಳ್ಳು, ಉದ್ದು, ಹೆಸರು ಹಾಗೂ ಮುಸುಕಿನ ಜೋಳ, ಹೊಗೆಸೊಪ್ಪು, ಶುಂಠಿ ಬಿತ್ತನೆ ಮಾಡಿದ್ದರು. ಆದರೆ ಜೂನ್‌ನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಬೆಳೆಗಳು ಒಣಗಿ ನೆಲಕಚ್ಚುವ ಹಂತ ತಲುಪಿತ್ತು. ಆದರೆ ತಡವಾಗಿಯಾದರೂ ಹದವಾದ ಮಳೆಯಾಗಿರುವ ಕಾರಣ ದ್ವಿದಳ ಧಾನ್ಯ ಬೆಳೆಗಳಿಗೆ ಜೀವಕಳೆ ಬಂದಿದೆ. ಇದು ಅಲ್ಪ ಪ್ರಮಾಣದ ಆದಾಯ ತಂದುಕೊಡಲಿದೆ ಎನ್ನುವ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಕೃಷಿ ಚಟುವಟಿಕೆಗಳು ಮತ್ತೆ ಗರಿಗೆದರಿದ್ದು, ರಾಗಿ, ಭತ್ತ ಮಡಿಗಳನ್ನು ಹಾಕಲು ರೈತರು ತಯಾರಿ ನಡೆಸುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ. ಪ್ರಸಕ್ತ ಋತುಮಾನದಲ್ಲಿ ತಾಲೂಕಿನಾದ್ಯಂತ ಹಲಸಂದೆ 825 ಹೆಕ್ಟೇರ್, ಹೆಸರು 25 ಹೆಕ್ಟೇರ್, ಉದ್ದು 24ಹೆಕ್ಟೇರ್, ಎಳ್ಳು 109 ಹೆಕ್ಟೇರ್, ಮಳೆಯಾಶ್ರಿತವಾಗಿ ಮುಸುಕಿನ ಜೋಳ 5,200 ಹೆಕ್ಟೇರ್, ನೀರಾವರಿಯಲ್ಲಿ 1,910 ಹೆಕ್ಟೇರ್, ರಾಗಿ 1,240 ಹೆಕ್ಟೇರ್ ಭೂ ಪ್ರದೇಶದಲ್ಲಿ ಈಗಾಗಲೇ ಬಿತ್ತನೆಯಾಗಿದೆ.

ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹ: ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಕೆರೆಕಟ್ಟೆ, ಹಳ್ಳ ಕೊಳ್ಳಗಳಲ್ಲಿ ನೀರು ಸಂಗ್ರಹ ಹೆಚ್ಚಾಗುತ್ತಿದೆ. ತಾಲೂಕಿನ ಕಸಬಾ ಹಳೆಕೋಟೆ ಹಳ್ಳಿ ಮೈಸೂರು ಹೋಬಳಿಗಳಲ್ಲಿ ವಾಡಿಕೆ ಮಳೆಯ ಪ್ರಮಾಣಕ್ಕಿಂತ ಹೆಚ್ಚು ಮಳೆ ಆಗಿದೆ. ಕಸಬಾ ಹೋಬಳಿಯಲ್ಲಿ 25.7 ಮಿ.ಮೀ. ಮಳೆ, ಹಳೆಕೋಟೆ ಹೋಬಳಿಯಲ್ಲಿ 21.4 ಮಿ.ಮೀ., ಹಳ್ಳಿ ಮೈಸೂರು ಹೋಬಳಿಯ ವ್ಯಾಪ್ತಿಯಲ್ಲಿ 27.7 ಮಿ.ಮೀ. ಮಳೆಯಾಗಿದೆ. ಪ್ರಸ್ತುತ ಋತುಮಾನದಲ್ಲಿ ಇನ್ನೂ ಅಧಿಕ ಮಳೆಯಾಗುವ ಮುನ್ಸೂಚನೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net