

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಪ್ರತಿ ವರ್ಷದಂತೆ ನಗರದಲ್ಲಿ ದ್ರೌಪದಮ್ಮ ಹೂವಿನ ಕರಗ ಮಹೋತ್ಸವವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶನಿವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
ದ್ರೌಪದಮ್ಮಕರಗ ಮಹೋತ್ಸವ ಸಮಿತಿ ಹಾಗೂ ಅರುಂಧತಿ ಹರಿಜನ ಅಭಿವೃದ್ಧಿ ಸಂಘದ ವತಿಯಿಂದ ಕರಗ ಮಹೋತ್ಸವದ ಅಂಗವಾಗಿ ಬಾಪೂಜಿ ನಗರದಲ್ಲಿರುವ ಶ್ರೀ ಮಹೇಶ್ವರಮ್ಮ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಿತು. ರಾತ್ರಿ 10.30ಕ್ಕೆ ಹೂವಿನ ಕರಗವನ್ನು ತಲೆಯ ಮೇಲೆ ಹೊತ್ತು ಹೊರ ಬಂದ ಕರಗದ ಪೂಜಾರಿ ಹೊಸೂರಿನ ಪುಟ್ಟಮ್ಮ, ದೇವಾಲಯದ ಮುಂದೆ ತಮಟೆ ವಾದನಕ್ಕೆ ಕೆಲ ಕಾಲ ನೃತ್ಯ ಪ್ರದರ್ಶಿಸಿದರು.
ಭಾನುವಾರ ಬೆಳಗಿನವರೆಗೂ ಹೂವಿನ ಕರಗವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಕರಗದ ಅಂಗವಾಗಿ ಬಿ.ಬಿ.ರಸ್ತೆ, ಎಂ.ಜಿ.ರಸ್ತೆ, ಬಜಾರ್ ರಸ್ತೆ, ಬಾಪೂಜಿ ನಗರದಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ನಗರಸಭಾ ಕಚೇರಿ ಮುಂಭಾಗ ವಾದ್ಯಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು. ತಮಟೆ ವಾದನ, ವಿವಿಧ ವೇಷಧಾರಿ ಕಲಾ ತಂಡಗಳ ನೃತ್ಯ, ಯುವ ಬಳಗದ ಸಾಹಸ ಕಸರತ್ತು ಸೇರಿ ರಾಜ್ಯ ಮತ್ತು ನೆರೆ ರಾಜ್ಯಗಳ, ಕಲಾ ತಂಡಗಳ ನಾನಾ ಪ್ರದರ್ಶನಗಳು ಜನ ಮೆಚ್ಚುಗೆ ಪಡೆದವು. ಆಟೋ ಚಾಲಕರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ವಿವಿಧೆಡೆ ಅನ್ನ ಸಂತರ್ಪಣೆ ಕೈಗೊಂಡಿದ್ದರು.
ಕರಗ ಮಹೋತ್ಸವಕ್ಕೆ ಶ್ರೀ ಮಹೇಶ್ವರಮ್ಮ ದೇವಾಲಯದ ಸಮೀಪ ದ್ರೌಪದಮ್ಮ ಕರಗ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಂ.ಶಿವಾನಂದ್ ಚಾಲನೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ದ್ರೌಪದಮ್ಮ ಕರಗ ಮಹೋತ್ಸವ ಸಮಿತಿ ಸಂಚಾಲಕ ಎಂ.ಎಸ್.ಸಂದೀಪ್ ಚಕ್ರವರ್ತಿ, ಶ್ರೀಮಾತಾ ಮಹೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷ ಕೆ.ಕಸ್ತೂರಿ ಶಿವಾನಂದ್, ನಗರಸಭೆ ಮಾಜಿ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶೇಷಾದ್ರಿ ಮತ್ತಿತರರು ಇದ್ದರು.