ದೌರ್ಜನ್ಯ ತಡೆಗೆ ಜಾಗೃತಿ ಅಗತ್ಯ

bkt-12-1
ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್.ಪ್ರಮೀಳಾ ನಾಯ್ಡು ಅಧ್ಯಕ್ಷತೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಿತು.
Published on

ಬಾಗಲಕೋಟೆ: ಮಹಿಳಾ ಮತ್ತು ಮಕ್ಕಳ ಮೇಲೆ ಉಂಟಾಗುವ ದೌರ್ಜನ್ಯ ಪ್ರಕರಣಗಳ ತಡೆಗೆ ಜಾಗೃತಿ ಅಗತ್ಯವಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್.ಪ್ರಮೀಳಾ ನಾಯ್ಡು ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಜರುಗಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅರಿವಿನ ಕೊರತೆಯಿಂದ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಯುವಕ, ಯುವತಿಯರು ದಾರಿ ತಪ್ಪುತ್ತಿದ್ದಾರೆ. ಲವ್ ಅಫೆರ್‌ನಿಂದಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.
ಅಽಕಾರಿಗಳು ಮಾನವಿಯತೆಯಿಂದ ಕೆಲಸ ನಿರ್ವಹಿಸಬೇಕು. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರೊಂದಿಗೆ ಸಮಾಲೋಚನೆ ಮಾಡಿ ಅವರ ಮನ ಪರಿವರ್ತಿಸಿ, ಸ್ವಾವಲಂಬನೆ ಜೀವನ ನಡೆಸುವಂತೆ ಮಾಡಿ, ಅನಿಷ್ಟ ಪದ್ಧತಿಯಾದ ಬಾಲ್ಯವಿವಾಹವನ್ನು ನಿರ್ಮೂಲನೆಗೊಳಿಸಿ ಸಮಾಜ ಪರಿವರ್ತನೆಗೆ ಮುಂದಾಗಬೇಕಿದೆ. ಮೈಸೂರಿನ ಜೈಲ್‌ನೊಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ೮೦ಕ್ಕೂ ಹೆಚ್ಚು ಯುವಕರು ದೌರ್ಜನ್ಯ ಪ್ರಕರಣದ ಹಿನ್ನಲೆಯಲ್ಲಿ ಶಿಕ್ಷೆ ಅನುಭವಿಸುತ್ತಿರುವುದು ಕಂಡುಬಂದಿತು. ಪ್ರಾರಂಭದಲ್ಲಿಯೇ ಮಕ್ಕಳಲ್ಲಿ ಅರಿವು ಮೂಡಿದಲ್ಲಿ ಇಂತಹ ಪ್ರಕರಣಗಳನ್ನು ತಡೆಯಲು ಸಾಧ್ಯವಾಗುವುದು ಎಂದು ಹೇಳಿದರು.
ಜಿ.ಪಂ ಸಿಇಒ ಟಿ.ಭೂಬಾಲನ್ ಮಾತನಾಡಿ, ಸಮಾಜದಲ್ಲಿರುವ ಸಮಸ್ಯೆಗಳನ್ನು ಅರಿವು ತಿಳುವಳಿಕೆ ನೀಡಬೇಕು. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಯುವಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಪೊಲೀಸ್ ಇಲಾಖೆಯ ಜವಾಬ್ದಾರಿ ಮುಖ್ಯವಾಗಿದ್ದು, ಇಂತಹ ಪ್ರಕರಣಗಳ ಬಗ್ಗೆ ದೂರುಗಳು ಬಂದಾಗ ಸ್ಪಂದಿಸಿ ದೌರ್ಜನ್ಯಕ್ಕೆ ಒಳಗಾದ ಮಗುವಿಗೆ ಶಿಕ್ಷಣ, ತಿಳುವಳಿಕೆ ನೀಡಬೇಕು. ಕೌಟುಂಬಿಕ ಕಲಹ, ದ್ವಿಪತ್ನಿತ್ವ, ಲವ್ ಅಫೆರ್‌ಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಈ ಬಗ್ಗೆ ಶಾಲಾ ಹಂತದಲ್ಲಿಯೇ ಜಾಗೃತಿ ಮೂಡಿಸುವ ಅವಶ್ಯವಿದೆ ಎಂದರು.
ಜಿಲ್ಲೆಯಲ್ಲಿರುವ ಸಾಂತ್ವನ ಹಾಗೂ ಸ್ವಾಧಾರ ಕೇಂದ್ರಗಳ ಅಧ್ಯಕ್ಷರು ತಮ್ಮ ಕೇಂದ್ರಗಳಲ್ಲಿ ದಾಖಲಾದ ಪ್ರಕರಣ, ಇತ್ಯರ್ಥಪಟ್ಟ ಪ್ರಕರಣ ಹಾಗೂ ಬಾಕಿ ಇರುವ ಪ್ರಕರಣಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಮುಧೋಳನ ಸಾರ್ಡ ಸಂಸ್ಥೆಯ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ, ಬಾದಾಮಿಯ ಹೊಳೆಹುಚ್ಚೇಶ್ವರ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಾಂತ್ವನ ಕೇಂದ್ರ, ಬೀಳಗಿ ಭಾರ್ಗವಿ ಮಹಿಳಾ ವಿವಿದೊದ್ದೇಶಗಳ ಸಂಘದ ಮಹಿಳಾ ಸಹಾಯವಾಣಿ ಸಾಂತ್ವನ ಕೇಂದ್ರ, ಇಳಕಲ್ಲ ಆಶಾದೀಪ ಅಂಗವಿಕಲರ ಸರ್ವ ಅಭಿವೃದ್ಧಿ ಸೇವಾ ಸಂಸ್ಥೆಯ ಮಹಿಳಾ ಸಾಂತ್ವನ ಕೇಂದ್ರ ಹಾಗೂ ಬಾಗಲಕೋಟೆ ಬಿವಿವ ಸಂಸ್ಥೆಯ ಸಾಂತ್ವನ ಕೇಂದ್ರದಿಂದ ಒಟ್ಟು ೭೫೨ ಪ್ರಕರಣಗಳ ಪೈಕಿ ೬೬೧ ಇತ್ಯರ್ಥಗೊಂಡಿದ್ದು, ೯೧ ಬಾಕಿ ಇರುವುದಾಗಿ ಸಭೆಗೆ ತಿಳಿಸಲಾಯಿತು.
ಜಿಲ್ಲೆಯಲ್ಲಿರುವ ೩ ಸ್ವಾಧಾರ ಕೇಂದ್ರಗಳಲ್ಲಿ ೩೯ ಮಹಿಳೆಯರು ಮತ್ತು ೧೦ ಅವಲಂಬಿತ ಮಕ್ಕಳು ವಾಸ್ತವ್ಯ ಇರುವುದಾಗಿ ತಿಳಿಸಿದರು. ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಒಟ್ಟು ೨೨೯ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಕರಣಗಳು ೩೫, ವಜಾಗೊಂಡ ಪ್ರಕರಣಗಳು ೧೧, ಇತ್ಯರ್ಥಗೊಂಡ ಪ್ರಕರಣಗಳು ೩೩ ಹಾಗೂ ಸಂರಕ್ಷಣಾಧಿಕಾರಿಗಳ ಹಂತದಲ್ಲಿ ಸಮಾಲೋಚನೆಯಿಂದ ಇತ್ಯರ್ಥಗೊಂಡ ಪ್ರಕರಣಗಳು ೪೮ ಇದ್ದು, ೧೩೭ ಬಾಕಿ ಪ್ರಕರಣ ಇರುವುದಾಗಿ ತಿಳಿಸಲಾಯಿತು.
ಸಭೆಯಲ್ಲಿ ಡಿವೈಎಸ್‌ಪಿ ಪ್ರಶಾಂತ ಮುನ್ನೊಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್, ಹಿರಿಯ ಸಹಾಯಕ ನಿರ್ದೇಶಕ ರಮೇಶ ಸೂಳಿಕೇರಿ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಭಿ ಕೇಂದ್ರ ಹಾಗೂ ಸಾಂತ್ವನ, ಸ್ವಾಧಾರ ಕೇಂದ್ರಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net