

ಚನ್ನಪಟ್ಟಣ : ಮುಡಾ ಹಗರಣ ಹಾಗೂ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಮೈತ್ರಿ ಪಕ್ಷಗಳು ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆ 3ನೇ ದಿನವೂ ಯಶಸ್ವಿಯಾಗಿ ಮುಂದುವರಿಯಿತು.
ರಾಜ್ಯಸರ್ಕಾರದ ವಿರುದ್ಧ ದೋಸ್ತಿಗಳು ನಡೆಸುತ್ತಿರುವ ಪಾದಯಾತ್ರೆ 2ನೇ ದಿನವಾದ ಭಾನುವಾರ ತಾಲೂಕಿನ ಕೆಂಗಲ್ ಬಳಿ ಮುಕ್ತಾಯಗೊಂಡಿತು. ಸೋಮವಾರ ಬೆಳಗ್ಗೆ ತಾಲೂಕಿನ ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿ ಬಿಜೆಪಿ ನಾಯಕರು ಪೂಜೆ ಸಲ್ಲಿಸುವ ಮೂಲಕ ಮೂರನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದರು. ತಡವಾಗಿ ಆಗಮಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯೂ ಆಂಜನೇಯಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರು. ಇದೇವೇಳೆ ದೇವಸ್ಥಾನದ ಆವರಣದಲ್ಲಿರುವ ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಸಮಾಧಿಗೆ ನಾಯಕರು ನಮಿಸಿದರು.
ಬಳಿಕ ಕೆಂಗಲ್ ಸನ್ನಿಧಿಯಿಂದ ದೋಸ್ತಿಗಳು ಮೂರನೇ ದಿನದ ಪಾದಯಾತ್ರೆಯನ್ನು ಆರಂಭಿಸಿದರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೆಲದೂರ ಹೆಜ್ಜೆ ಹಾಕಿದರು. ಉಭಯ ಪಕ್ಷದ ಸಹಸ್ರಾರು ಕಾರ್ಯಕರ್ತರ ಜತೆಗೂಡಿ ಶಾಸಕರು ಅತಿ ಉತ್ಸಾಹದಿಂದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಪಾದಯಾತ್ರೆ ನಗರಕ್ಕೆ ಆಗಮಿಸುತ್ತಲೆೇ ತಾಲೂಕಿನಿಂದ ಭವ್ಯ ಸ್ವಾಗತ ಕೋರಲಾಯಿತು. ವಿಜಯೇಂದ್ರ ಹಾಗೂ ನಿಖಿಲ್, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಜತೆ ಹೆಜ್ಜೆ ಹಾಕುತ್ತ ಮುಂದೆ ಸಾಗಿದರೆ, ಕೇಂದ್ರ ಸಚಿವ ಕುಮಾರಸ್ವಾಮಿ ತೆರೆದವಾಹನದ ಮೂಲಕ ರೋಡ್ ಶೋ ನಡೆಸಿದರು. ಪಾದಯಾತ್ರೆಗೆ ಶೇರ್ವಾ ಸರ್ಕಲ್ ಹಾಗೂ ಸಾತನೂರು ಸರ್ಕಲ್ನಲ್ಲಿ ಸಹಸ್ರಾರು ಮಂದಿ ಜತೆಯಾದರು.
ಇದಾದಬಳಿಕ, ನಗರದ ತಾಲೂಕು ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶದಲ್ಲಿ ಎರಡು ಪಕ್ಷದ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆ ಮುಕ್ತಾಯದ ಬಳಿಕ ಮಾಜಿ ಸಿಎಂ.ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಪಾದಯಾತ್ರೆಯಿಂದ ನಿರ್ಗಮಿಸಿದರು. ಬಳಿಕ ಎಲ್ಲ ನಾಯಕರು ಪಾದಯಾತ್ರೆ ಮುಂದುವರಿಸಿದರು. ಪಾದಯಾತ್ರೆ ಮಧ್ಯೆ ವಿಜಯೇಂದ್ರ ಹಾಗೂ ನಿಖಿಲ್ ಕುಮಾರಸ್ವಾಮಿ ನಗರದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಊಟ ಬಡಿಸಿದ ವಿಜಯೇಂದ್ರ!
ತಾಲೂಕಿನ ದೊಡ್ಡಮಳೂರು ಗ್ರಾಮದ ಬಳಿ ಪಾದಯಾತ್ರಿಗಳ ವಿಶ್ರಾಂತಿ ಹಾಗೂ ಭೋಜನಕ್ಕೆ ವ್ಯವಸ್ಥೆ ಮಾಡಲಾಯಿತು. ಪಾದಯಾತ್ರಿಗಳು ಹಾಗೂ ನಾಯಕರು ತೊಗರಿಕಾಳು ಸಾರು, ಮುದ್ದೆ, ಅನ್ನ, ಸಾಂಬಾರ್, ಪಕೋಡ ಹಾಗೂ ಪಾಯಸ ಸವಿದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೈಯಾರೆ ಕಾರ್ಯಕರ್ತರಿಗೆ ಊಟ ಬಡಿಸಿದರು. ದಾರಿ ಮಧ್ಯೆ ಸೌತೆಕಾಯಿ, ನೀರು ಹಾಗೂ ಮಜ್ಜಿಗೆ ವ್ಯವಸ್ಥೆ ಮಾಡಲಾಯಿತು. ಸಂಜೆ ವೇಳೆ ಪಾದಯಾತ್ರೆ ಜಿಲ್ಲೆಯ ಗಡಿಯನ್ನು ದಾಟಿ ಮಂಡ್ಯ ಜಿಲ್ಲೆ ಪ್ರವೇಶಿಸಿತು. ಮದ್ದೂರಿನ ನಿಡಘಟ್ಟಬಳಿ ಇಂದಿನ ಪಾದಯಾತ್ರೆ ಮುಕ್ತಾಯವಾಗಿದ್ದು, ಮಂಗಳವಾರ ಮದ್ದೂರು ಪ್ರವೇಶಿಸಲಿದೆ.
ಯೋಗೇಶ್ವರ್ ಟಿಕೆಟ್ ನೀಡುವಂತೆ ಕೂಗಾಟ : ಪಾದಯಾತ್ರೆಯ ಬಹಿರಂಗ ಸಮಾವೇಶದಲ್ಲಿ ಚನ್ನಪಟ್ಟಣ ಟಿಕೆಟ್ ವಿಚಾರದ ಬಗ್ಗೆ ಮಾತುಗಳು ಕೇಳಿಬಂದವು. ಸಮಾವೇಶದ ಆರಂಭದಲ್ಲಿ ಮಾತನಾಡಿದ ಮಾಜಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ತಾಲೂಕಿನ ನೀರಾವರಿ ಹರಿಕಾರ, ಆಧುನೀಕ ಭಗೀರಥ ಎಂದು ಹೆಸರು ಪಡೆದಿರುವ ಸಿ.ಪಿ.ಯೋಗೇಶ್ವರ್ ಎರಡು ಪಕ್ಷದ ಮೈತ್ರಿಗೆ ಮೊದಲು ಧ್ವನಿ ಎತ್ತಿದವರು. ಕುಮಾರಣ್ಣ ಹಾಗೂ ಯೋಗೇಶ್ವರ್ ಚನ್ನಪಟ್ಟಣದ ಎರಡು ಕಣ್ಣುಗಳು. ಈ ಎರಡು ಕಣ್ಣಗಳು ಜತೆಯಲ್ಲಿರಬೇಕು. ಎರಡು ಪಕ್ಷಗಳು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಒಗ್ಗೂಡಿ ಹೋರಾಟ ನಡೆಸಬೇಕು. ಯೋಗೇಶ್ವರ್ ಅಭ್ಯರ್ಥಿಯಾಗಲಿ ಎಂಬುದು ನಮ್ಮ ಅಭಿಪ್ರಾಯ ಎಂದು ಘೋಷಿಸಿದರು. ಇವರ ಭಾಷಣದ ನಂತರ ಯಡ್ಡಿಯೂರಪ್ಪ ಹಾಗೂ ವಿಜಯೇಂದ್ರ ಮುಂಭಾಗ ಸಿ.ಪಿ.ಯೋಗೇಶ್ವರ್‌ಗೆ ಟಿಕೆಟ್ ಕೊಡುವಂತೆ ಯೋಗೇಶ್ವರ್ ಬೆಂಬಲಿಗರು ಕೂಗಾಟ ನಡೆಸಿದರು. ಪ್ರಚಾರದ ಪಾದಯಾತ್ರೆಯಲ್ಲಿ ಯೋಗೇಶ್ವರ್ ಭಾವಚಿತ್ರ ಇಲ್ಲದ್ದಕ್ಕೂ ಆಕ್ಷೇಪವ್ಯಕ್ತಪಡಿಸಿದರು. ಈ ವೇಳೆ ಇರಲಿ ಬಿಡಣ್ಣ ಎಂದು ವಿಜಯೇಂದ್ರ ಕಾರ್ಯಕರ್ತರನ್ನು ಸಮಾಧಾನಪಡಿಸಿದರು.
ಬಳಿಕ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವೇದಿಕೆ ಏರಿ ಭಾಷಣ ಮಾಡುವ ವೇಳೆಯೂ ಯೋಗೇಶ್ವರ್ ಬೆಂಬಲಿಗರು ಕೂಗಾಟ ಮುಂದುವರಿಸಿ, ಯೋಗೇಶ್ವರ್‌ಗೆ ಟಿಕೆಟ್ ಕೊಡುವಂತೆ ಒತ್ತಾಯಿಸಿದರು. ಮೊದಲು ಪಕ್ಷದ ಕೆಲಸ ಮಾಡಣ್ಣ. ನಾನು ಟಿಕೆಟ್ ಘೋಷಣೆ ಮಾಡಲು ಬಂದಿಲ್ಲ ಎಂದರು.
ಪದೆಪದೇ ಯೋಗೇಶ್ವರ್‌ಗೆ ಟಿಕೆಟ್ ಕೊಡುವ ಒತ್ತಾಯ ಕೇಳಿಬಂದ ಕಾರಣ, ಕುಪಿತಗೊಂಡ ಕುಮಾರಸ್ವಾಮಿ, ನೀವು ಏನು ಮಾಡ್ತಾ ಇದ್ದೀರಿ ಎಂಬುದು ನನಗೆ ಗೊತ್ತಿದೆ. ಸಮಾನ ಮನಸ್ಕರ ಸಭೆ ಕರೆಯುತ್ತೀರಿ ಅಲ್ವಾ? ಸೀಟು ಕೊಡುವುದು ನಾನು ಹಾಗೂ ಯಡಿಯೂರಪ್ಪ. ದೆಹಲಿಯಲ್ಲಿ ಟಿಕೆಟ್ ಬಗ್ಗೆ ಅಂತಿಮ ತೀರ್ಮಾನ ಆಗುತ್ತದೆ. ರಸ್ತೆಯಲ್ಲಿ ಟಿಕೆಟ್ ಘೋಷಣೆ ಮಾಡಲು ಆಗಲ್ಲ. ಯಾವ ಸಭೆ ಬೇಕಾದರೂ ಮಾಡಿದರೆ ಆಗಲ್ಲ. ಪಕ್ಷ ನಿಷ್ಠೆ ಇಲ್ಲದೇ ವೈಯಕ್ತಿಕ ಸ್ಥಾನಮಾನಗಳಿಗೆ ಹೋರಾಟ ಮಾಡಿದರೆ ಪ್ರಯೋಜನ ಇಲ್ಲ. ಪಕ್ಷ ನಿಷ್ಠೆ ಇಟ್ಟುಕೊಂಡು ಕೆಲಸ ಮಾಡಿ. ನಾನು ಈ ಕ್ಷೇತ್ರ ಉಳಿಸಿಕೊಳ್ಳಲೇಬೇಕು. ಎನ್‌ಡಿಎ ಅಭ್ಯರ್ಥಿ ಯಾರೇ ಆದರೂ ಕೆಲಸ ಮಾಡಬೇಕು ಎಂದರು.
ಸಮಾವೇಶದತ್ತ ತಲೆಹಾಕದ ಸೈನಿಕ! : ಉಪಚುನಾವಣೆ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿರುವ ಬಿಜೆಪಿ ನಾಯಕ ಯೋಗೇಶ್ವರ್ ನಗರದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಭಾಗವಹಿಸದೇ ತನ್ನ ಆಕ್ರೋಶ ವ್ಯಕ್ತಪಡಿಸಿದರು. ಕೆಂಗಲ್ ಬಳಿಯಿಂದ ಕೆಲದೂರ ಪಾದಯಾತ್ರೆಯಲ್ಲಿ ಕಾಣಿಸಿಕೊಂಡ ಅವರು ತದನಂತರ, ಪಾದಯಾತ್ರೆಯಿಂದ ನಿರ್ಗಮಿಸಿದರು. ಮೈತ್ರಿ ಪಕ್ಷಗಳು ನಗರದಲ್ಲಿ ಬೃಹತ್ ಶಕ್ತಿ ಪ್ರದರ್ಶನ ನಡೆಸಿದರೆ, ಯೋಗೇಶ್ವರ್ ಅನುಪಸ್ಥಿತಿ ಚರ್ಚೆಗೆ ಕಾರಣವಾಯಿತು. ಅವರ ತಂದೆಯವರ ನಿಧನದಿಂದ ಯೋಗೇಶ್ವರ್ ಪಾದಯಾತ್ರೆ ಕಾರ್ಯಕ್ರಮದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿಲ್ಲ ಎಂಬ ಮಾತುಗಳು ಕೇಳಿಬಂದರೂ, ಟಿಕೆಟ್ ತಪ್ಪುವ ಹಿನ್ನೆಲೆಯಲ್ಲಿ ಯೋಗೇಶ್ವರ್ ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.