

ದಾಂಡೇಲಿ: ತನ್ನ ದೈಹಿಕ ಬಯಕೆ ತೀರಿಸಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಜತೆ ಕೆಲಸ ಮಾಡುವ ಮಹಿಳೆಯನ್ನು ಕೊಲೆ ಮಾಡಿದ ಘಟನೆ ದಾಂಡೇಲಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜೊಯಿಡಾ ತಾಲೂಕಿನ ಪೊಟೋಳಿ ಗ್ರಾಮದ ನೇಚರ್ ಹೋಂ ಸ್ಟೇ ನಲ್ಲಿ ಅಡುಗೆ ಸಹಾಯಕಿಯಾಗಿದ್ದ ದಾಂಡೇಲಿ ಗಾಂಧಿನಗರದ ಸುಶೀಲಾ ಬೋವಿವಡ್ಡರ್(50)ಕೊಲೆಯಾದ ಮಹಿಳೆ.
ಅದೇ ಹೋಂ ಸ್ಟೇನಲ್ಲಿ ಅಡುಗೆ ಮಾಡುತ್ತಿದ್ದ ದಾಂಡೇಲಿ ಗಾಂಧಿನಗರದ ರವಿ ರಾಜು ರೆಡ್ಡಿ(50) ಹಾಗೂ ಹೌಸ್ ಕೀಪರ್ ವಿಜಯ ಮಾದೇವ ಮಾಸಾಳ(30)ಕೊಲೆ ಮಾಡಿದ ಆರೋಪಿಗಳು. ಗುರುವಾರ ಕೊಲೆ ನಡೆದಿದ್ದು, ಶನಿವಾರ ಆರೋಪಿಗಳನ್ನು ಬಂಧಿಸಲಾಗಿದೆ.
ಹೋಂ ಸ್ಟೇನಲ್ಲಿ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟ ಬಗ್ಗೆ ಆಕೆಯ ಪುತ್ರಿ ಶೋಭಾ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು. ದಾಂಡೇಲಿ ಸಿಪಿಐ ಬಿ.ಎಸ್. ಲೋಕಾಪುರ ನೇತೃತ್ವದಲ್ಲಿ ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ತನ್ನ ದೈಹಿಕ ಆಸೆ ತೀರಿಸಿಲ್ಲ ಎಂದು ರವಿ ರೆಡ್ಡಿ ಮಹಿಳೆಯನ್ನು ಕೊಲೆ ಮಾಡಿದ್ದು, ಸಾಕ್ಷಿ ನಾಶ ಮಾಡಲು ವಿಜಯ ಸಹಾಯ ಮಾಡಿದ್ದ ಎನ್ನಲಾಗಿದೆ.