

ಕೆ.ಆರ್.ನಗರ: ಸಂವಿಧಾನ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಎಲ್ಲರೂ ದೇಶದ ಏಕತೆ, ಸಮಗ್ರತೆ, ಪ್ರಗತಿಗಾಗಿ ಶ್ರಮಿಸೋಣ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ ನಮ್ಮದಾಗಿದೆ. ಎಲ್ಲ ಧರ್ಮದ ಭಾಷಿಕರು ಹಾಗೂ ಜಾತಿಯವರಿಗೂ ಸಲ್ಲುವಂತಹ ಸಂವಿಧಾನ ನೀಡದ ಬಾಬಾ ಸಾಹೇಬರ ಕೊಡುಗೆ ಅಪಾರವಾಗಿದೆ ಎಂದರು.
ಸಂವಿಧಾನದ ಮುಂದೆ ಎಲ್ಲರು ಸಮಾನರು. ಬಡವ, ಶ್ರೀಮಂತ ಎಂಬ ಬೇದ ಭಾವವಿಲ್ಲದೆ ಕಾನೂನುಗಳು ಎಲ್ಲರಿಗೂ ಸರಿಸಮನಾಗಿ ಅರ್ಥೈಸುತ್ತವೆ. ದೇಶದ ಪ್ರಜೆಗಳಾದ ನಾವೆಲ್ಲ ಒಂದು ಎಂಬ ಉದ್ದೇಶದಿಂದಾಗಿ ಸಂವಿಧಾನದ ಮಹತ್ವವನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಸರ್ಕಾರ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸುತ್ತಿದೆ ಎಂದು ಹೇಳಿದರು.
ಸಂವಿಧಾನದಡಿಯಲ್ಲಿ ಜನಪ್ರತಿನಿಧಿಗಳಾಗಿ, ಸರ್ಕಾರಿ ನೌಕರರಾಗಿ ಸ್ವಾತಂತ್ರೃವಾಗಿ ಬದುಕು ನಡೆಸುತ್ತಿದ್ದೇವೆ. ಅದನ್ನು ಅರಿತು ದೇಶ ಮತ್ತು ಸಮಾಜಕ್ಕೆ ಗೌರವ ಸಲ್ಲಿಸುವ ಕೆಲಸ ಮಾಡಬೇಕು. ಅಂಬೇಡ್ಕರ್ ಅವರ ಸಿದ್ಧಾಂತಗಳು, ಆದರ್ಶಗಳನ್ನು ಅಳವಡಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.
ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ನಿವೃತ್ತ ಪ್ರಾಂಶುಪಾಲ ಡಾ.ಕೃಷ್ಣ ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೆ ಮುನ್ನ ಮೈಸೂರು- ಹಾಸನ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸಂವಿಧಾನ ಪೀಠಿಕೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ಸಂವಿಧಾನ ಪೀಠಿಕೆ ಓದಲಾಯಿತು.
ತಾಪಂ ಇಒ ಕುಲದೀಪ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಲ್.ಶಂಕರ್‌ಮೂರ್ತಿ, ಟಿಎಚ್‌ಒ ಡಾ.ಡಿ.ನಟರಾಜ್, ಅಬಕಾರಿ ನಿರೀಕ್ಷಕ ವೈ.ಎಸ್.ಲೋಕೇಶ್, ಪುರಸಭಾ ಸದಸ್ಯರಾದ ಪ್ರಕಾಶ್, ಶಂಕರ್, ಸೈಯದ್ ಸಿದ್ಧಿಕ್, ಶಿವುನಾಯಕ್, ತಾಪಂ ಮಾಜಿ ಅಧ್ಯಕ್ಷ ಎಂ.ಎಚ್.ಸ್ವಾಮಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಚ್.ಎಚ್.ನಾಗೇಂದ್ರ, ದಲಿತ ಮುಖಂಡರಾದ ಡಿ.ಕೆ.ಕೊಪ್ಪಲು ರಾಜಯ್ಯ, ಎಂ.ಲೋಕೇಶ್, ಕಳ್ಳಿಮುದ್ದನಹಳ್ಳಿ ಚಂದ್ರು, ಹೊಸಕೋಟೆ ಚಲುವರಾಜು, ಪುಟ್ಟಣಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಎಂ.ಎಸ್.ಮಹದೇವ್, ವಕ್ತಾರ ಸೈಯದ್ ಜಾಬೀರ್ ಹಾಜರಿದ್ದರು.