ದೇಶದ ಸಂಸ್ಕೃತಿ ಉಳಿವಿಗೆ ಸಂಸ್ಕೃತ ಅತಿಮುಖ್ಯ

06 HANUR 1
Published on

ಹನೂರು: ದೇಶದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕಾದರೆ ಸಂಸ್ಕೃತ ಅತಿಮುಖ್ಯವಾದುದು, ಆದ್ದರಿಂದ ಸಂಸ್ಕೃತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಕುಂದೂರು ಮಠಾಧ್ಯಕ್ಷ ಶ್ರೀ ಶರತ್‌ಚಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.


ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಆವರಣದಲ್ಲಿ ಬುಧವಾರ ಶ್ರೀಮಲೆ ಮಹದೇಶ್ವರಸ್ವಾಮಿ ಕೃಪಾ ಎಜುಕೇಷನ್ ಸೊಸೈಟಿ ಹಾಗೂ ಚಾಮರಾಜನಗರ ಜಿಲ್ಲಾ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಿದ್ದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.


ಧರ್ಮದ ಶಿಷ್ಟಾಚಾರದ ಪಾಲನೆ ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಸಮಾಜದ ಎಲ್ಲ ವರ್ಗಗಳಿಗೂ ಮಠಗಳಿವೆ. ತನ್ನದೇ ಆದ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಹೊಂದಿವೆ. ಆದರೆ ಎಲ್ಲ ವರ್ಗಕ್ಕೂ ಇರುವುದೊಂದೇ ಸಂಸ್ಕೃತ. ಆದ್ದರಿಂದ ಸಂಸ್ಕೃತಿಯನ್ನು ರಕ್ಷಿಸಬೇಕಾದರೆ ಸಂಸ್ಕೃತ ಮುಖ್ಯ ಪಾತ್ರವನ್ನು ವಹಿಸುತ್ತದೆ. ರಾಮಾಯಾಣ, ಮಹಾಭಾರತವನ್ನು ಮಹಾಗ್ರಂಥವನ್ನು ಪರಿಪೂರ್ಣವಾಗಿ ಅರ್ಥೈಸಿಕೊಳ್ಳಬೇಕಾದರೆ ಸಂಸ್ಕೃತ ಭಾಷೆ ಮುಖ್ಯ. ಆದರೆ ಬಹುತೇಕ ಜನರು ಸಂಸ್ಕೃತ ಭಾಷಾ ಕಲಿಯುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದರು.


ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಜಗತ್ತಿನ ಭಾಷೆಗಳ ಜೀವ ಸಂಸ್ಕೃತ. ಈ ಭಾಷೆ ಆಧ್ಯಾತ್ಮಿಕತೆಯನ್ನು ಕಲಿಸುವುದು ಒಂದೆಡೆಯಾದರೆ, ವೈಜ್ಞಾನಿಕ ನೆಲೆ ಒದಗಿಸುತ್ತದೆ. ಹಾಗಾಗಿ ಆಧ್ಯಾತ್ಮಿಕತೆ ಮತ್ತು ವೈಜ್ಞಾನಿಕತೆ ಒಂದು ನಾಣ್ಯದ 2 ಮುಖಗಳು ಎಂದರು.


ದೇಶದಲ್ಲಿ 1910ರ ದಶಕದಲ್ಲಿ ಸಾಕ್ಷರತಾ ಪ್ರಮಾಣ ಕಡಿಮೆ ಇತ್ತು. ಆದರೆ ಮಠ ಮಾನ್ಯಗಳು ಸ್ಥಾಪನೆಯಾದ ಬಳಿಕ ಸಂಸ್ಕೃತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ ಪರಿಣಾಮ ಸಾಕ್ಷರತೆ ಪ್ರಮಾಣ ಗಣನೀಯವಾಗಿ ಏರಿಕೆಯಾಯಿತು. ಈ ಹಿಂದೆ ಮಕ್ಕಳನ್ನು ಸಂಸ್ಕೃತ ಪಾಠಶಾಲೆಗಳಿಗೆ ದಾಖಲು ಮಾಡಿಕೊಂಡು ಸಂಸ್ಕಾರವನ್ನು ಕಲಿಸಲಾಗುತ್ತಿತ್ತು. ಹಾಗಾಗಿ ಸಂಸ್ಕೃತ ಕಲಿಕೆ ಮುಖ್ಯವಾದುದು. ಈ ದಿಸೆಯಲ್ಲಿ 1963ರಲ್ಲಿ ಸಾಲೂರು ಮಠ ಪ್ರಾರಂಭಿಸಿದ ಸಂಸ್ಕೃತ ಪಾಠಶಾಲೆ 60 ವರ್ಷಗಳನ್ನು ಪೂರೈಸಿದ್ದು, ಇಲ್ಲಿ ಶಿಕ್ಷಣ ಪಡೆದ ಬಹುತೇಕರು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಮೆಚ್ಚುಗೆಯ ಸಂಗತಿ ಎಂದು ತಿಳಿಸಿದರು.


ಮೈಸೂರು ವಲಯದ ಸಂಸ್ಕೃತ ಪರಿವೀಕ್ಷಕ ಮಲ್ಲಣ್ಣ ಮಾತನಾಡಿ, ಎಲ್ಲ ಭಾಷೆಗಳಲ್ಲೂ ಸಂಸ್ಕೃತ ಭಾಷೆ ಶ್ರೇಷ್ಠವಾದುದು. ಇದರಲ್ಲಿ ಸಂಸ್ಕೃತಿ ಹಾಗೂ ಸಂಸ್ಕಾರ ಅಡಗಿದೆ. ಇದರಿಂದ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯವಾಗಿದೆ. ಈ ದಿಸೆಯಲ್ಲಿ ಹಲವು ವಿದ್ಯಾಸಂಸ್ಥೆಗಳು ಇಂದಿಗೂ ಸಂಸ್ಕೃತ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯ. ಇದರಿಂದ ಸಂಸ್ಕೃತಿ ಉನ್ನತಿಗೆ ಸಹಕಾರಿಯಾಗಿದೆ ಎಂದರು.


ಇದಕ್ಕೂ ಮೊದಲು ಮಹದೇಶ್ವರ ಬೆಟ್ಟದ ವಿವಿಧ ಬಡಾವಣೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜಾಥಾ ನಡೆಸುವ ಮೂಲಕ ಜನರಲ್ಲಿ ಸಂಸ್ಕೃತ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಿದರು.


ಸಂಸ್ಕೃತದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಸನ್ಮಾನಿಸಲಾಯಿತು. ಪ್ರಾಧಿಕಾರದ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ಗುಂಡೇಗಾಲ ಮಠದ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ, ದಂಡಿಕೆರೆ ಮಠದ ಶ್ರೀಬಸವಲಿಂಗ ಸ್ವಾಮೀಜಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಅಹಲ್ಯಾ, ಸಹಾಯಕ ಕುಲಸಚಿವ ಶಿವಮೂರ್ತಿ, ಬೆಂಗಳೂರು ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ಪ್ರಾಧ್ಯಾಪಕ ಸಿ.ಪಾಲಯ್ಯ, ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ಪರಶಿವಮೂರ್ತಿ, ವಲಯ ಸಂಯೋಜಕ ಇಂದ್ರೇಶಪ್ಪ, ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಬೇಡಗಂಪಣ ಸಮಾಜದ ಅಧ್ಯಕ್ಷ ಪುಟ್ಟಣ್ಣ, ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net