

ಬಾಗಲಕೋಟೆ: ಈ ದೇಶದ ಪ್ರಧಾನಿ ಆದವರು ಪಕ್ಷದ ಧೋರಣೆಗಳಿಗೆ ಅಂಟಿಕೊಳ್ಳುವುದನ್ನು ಬಿಟ್ಟು, ದೇಶಕ್ಕೆ ಆದ್ಯತೆ ಕೊಡಬೇಕು. ಮಲತಾಯಿ ಧೋರಣೆ ಮಾಡದೇ ತಾಯಿ ಹೃದಯ ಹೊಂದಬೇಕೆಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ.
ಶನಿವಾರ ಜಿಲ್ಲೆಯ ಘಟಪ್ರಭಾ ಮತ್ತು ಕೃಷ್ಣಾ ನದಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿದ ಅವರು ಮುಧೋಳ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.
ಬರ ಮತ್ತು ಪ್ರವಾಹ ಸಂದರ್ಭದಲ್ಲಿ ಪರಿಹಾರ ನೀಡುವಾಗ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶದ ಆದ್ಯತೆಗೆ, ದೇಶಕ್ಕೆ ಗಂಡಾಂತರ ಬಂದಾಗ ಮಲತಾಯಿ ಧೋರಣೆ ಮಾಡೋದು ಸರಿಯಿಲ್ಲ. ಕೇಂದ್ರ ಸರ್ಕಾರ ತಾಯಿ ಧೋರಣೆ ಅನುಸರಿಸಬೇಕು ಎಂದು ಸಲಹೆ ನೀಡಿದರು.
ಸದ್ಯ ಸರ್ಕಾರ ಉಳಿಸಿಕೊಳ್ಳಲು ಬಿಹಾರ ಮತ್ತು ಆಂದ್ರಕ್ಕೆ ಮಾತ್ರ ಧಾರಳವಾಗಿ ಹಣ ಕೊಡುತ್ತಿದೆ.
ಭಯದ ವಾತಾವರಣದಲ್ಲಿ ಕೇಂದ್ರ ಸರ್ಕಾರ ನಡೆಯುತ್ತಿದೆ. ಯಾರು ಹೆದರಿಸ್ತಾರೆ ಅವರಿಗೆ ದುಡ್ಡು ಕೊಡುವುದು, ಉಳಿದ ರಾಜ್ಯಗಳಿಗೆ ಮಲತಾಯಿ ಧೋರಣೆ ಅನುಸರಿಸುವುದು ಒಳ್ಳೆಯದಲ್ಲ ಎಂದರು.
ಮೋದಿ ಸಾಹೇಬರು ದೇಶದ ಪ್ರಧಾನಿಗಳು. ಎಲ್ಲರನ್ನು ಸಮದೃಷ್ಠಿಯಿಂದ ಕಾಣುವಂತಹ ಪ್ರವೃತ್ತಿ ಬೆಳೆಸಿಕೊಳ್ಳಬೇಕು.
ದೇಶದ ಪ್ರಧಾನಿ ಮಲತಾಯಿ ಧೋರಣೆ ಮಾಡಲು ಹೋದರೆ ಅದರಿಂದ ಪಕ್ಷಕ್ಕೆ ಲಾಭವಾಗುತ್ತೋ ನಷ್ಟವಾಗುತ್ತೋ ಗೊತ್ತಿಲ್ಲ. ಆದರೆ, ದೇಶದ ಬಗ್ಗೆ ಗಮನ ಹರಿಸಿದರೆ ಒಳ್ಳೆಯದು. ಕರ್ನಾಟಕ ರಾಜ್ಯಕ್ಕೆ ಬರ ಸಂದರ್ಭದಲ್ಲಿ ನಮಗೆ ನೀಡಬೇಕಾದ ಪರಿಹಾರವನ್ನು ಕೇಂದ್ರ ನೀಡಲಿಲ್ಲ. ಕೊನೆಗೆ ಸುಪ್ರೀಂಕೋರ್ಟ್ ಆದೇಶದಿಂದ ಪರಿಹಾರ ಪಡೆಯುವಂತಾಯಿತು.
ಸುಪ್ರೀಂ ಆದೇಶ ಮಾಡದೇ ಹೋಗಿದ್ದರೆ ನಮಗೆ ಬರ ಪರಿಹಾರ ಕೊಡುತ್ತಿರಲಿಲ್ಲ. ಈ ರೀತಿ ಕೇಂದ್ರ ಸರ್ಕಾರ ನಡೆದುಕೊಳ್ಳುವುದು ಸರಿಯಲ್ಲ. ಇದೀಗ ರಾಜ್ಯದಲ್ಲಿ ಅತೀವೃಷ್ಟಿ ಹಾಗೂ ಪ್ರವಾಹದಿಂದ ಆಗಿರುವ ಹಾನಿಯ ಪರಿಹಾರವನ್ನ ಕೇಂದ್ರಕ್ಕೆ ಕೇಳುತ್ತೇವೆ. ಇಂಥ ಸಂದರ್ಭದಲ್ಲಿ ಪ್ರಧಾನಮಂತ್ರಿಗಳಾದವರು ತಾಯಿ ಹೃದಯ ಹೊಂದಬೇಕಾಗುತ್ತದೆ ಎಂದು ಹೇಳಿದರು.