

ಕನಕಪುರ : ಮುಂದಿನ ಬಜೆಟ್‌ನಲ್ಲಿ ರೈಲ್ವೆ ಮತ್ತು ಮೇಕೆದಾಟು ಯೋಜನೆ ಸೇರಿಸಿ ಕನ್ನಡಿಗರು ಹೆಮ್ಮೆಪಡುವ ಕೆಲಸ ಮಾಡಲಾಗುವುದು ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ನಗರದ ದೇಗುಲಮಠ ಹಾಗೂ ಹಿರಿಯ ವಿದ್ಯಾರ್ಥಿಗಳ-ಹಿತೈಷಿಗಳ ಸಂಘದಿಂದ ಶನಿವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಅಧಿಕಾರ ವಹಿಸಿಕೊಂಡ ಒಂದು ಗಂಟೆಯೊಳಗೆ ನೂರು ದಿನಗಳ ಕಾರ್ಯಕ್ರಮದ ರೂಪುರೇಷ ಯೋಜನೆಯನ್ನು ಮೋದಿ ಅವರು ನಮ್ಮ ಮುಂದೆ ಇಟ್ಟಿದ್ದಾರೆ. ಎಲ್ಲ ರಾಜ್ಯಗಳ ಪ್ರಗತಿಗೆ ಮೋದಿ ಅವರು ಕಂಕಣಬದ್ಧರಾಗಿದ್ದಾರೆ ಎಂದರು.
ಮಠದ ಹಳೆಯ ವಿದ್ಯಾರ್ಥಿಯಾದ ನನಗೆ ಇಂದು ಮಠದಿಂದ ಸನ್ಮಾನ ಮಾಡಿ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ರಾಜ್ಯಸಚಿವರಾಗಿರುವುದು ಹೆಮ್ಮೆಯ ವಿಚಾರ. ಕನಕಪುರ ಕ್ಷೇತ್ರದಲ್ಲಿ ರಾಮಕೃಷ್ಣ ಹೆಗಡೆ, ಮಾಜಿ ಪ್ರಧಾನಿ ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಎಸ್.ಕರಿಯಪ್ಪ, ಪುಟ್ಟದಾಸು ನಂತರ ಡಿ.ಕೆ.ಶಿವಕುಮಾರ್‌ರಂತಹ ಘಟಾನುಘಟಿ ನಾಯಕರು ಇಲ್ಲಿಂದ ಆಯ್ಕೆಯಾಗುವ ಮೂಲಕ ಈ ತಾಲೂಕು ಪ್ರತಿಷ್ಠೆಯಾಗಿ ಹೊರಹೊಮ್ಮಿದೆ ಎಂದರು.
ನನಗೆ ಅಧಿಕಾರ ಸಿಕ್ಕ ಸಮಯದಲ್ಲಿ ನನ್ನ ತಂದೆ-ತಾಯಿ, ಗುರು-ಹಿರಿಯರಿಗೆ ಗೌರವ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವುದು ವಾಡಿಕೆ. ಅದಕ್ಕಾಗಿಯೇ ನನ್ನ ತಂದೆ-ತಾಯಿ ಸಮಾಧಿಗೆ ಪೂಜೆ ಸಲ್ಲಿಸಿ, ನಾನು ಕಲಿತ ಮಠಕ್ಕೆ ಭೇಟಿ ನೀಡಿದ್ದೇನೆ. ನನ್ನ ಸ್ವಂತ ಗ್ರಾಮ ಚಿಕ್ಕಮುದವಾಡಿಯಲ್ಲಿ 90 ವರ್ಷದ ಸಹೋದರಿಯನ್ನೂ ಭೇಟಿಯಾಗುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದೇನೆ ಎಂದರು.
ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಹಾಗೂ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿಗಳು ಆಶೀರ್ವಚನ ನೀಡಿ ಸೋಮಣ್ಣರಿಗೆ ಶುಭ ಹಾರೈಸಿದರು.
ಬಿಲ್ವಪತ್ರೆ ಮಠದ ಶ್ರೀ ಶಿವಲಿಂಗ ಸ್ವಾಮೀಜಿ, ಮರಳವಾಡಿ ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿ, ಶ್ರೀ ಪ್ರಭುಕಿರೀಟ ಸ್ವಾಮೀಜಿ, ಅತ್ತಿಹಳ್ಳಿ ಮಠದ ಶ್ರೀ ಮಹಾಲಿಂಗ ಸ್ವಾಮೀಜಿ, ಶೈಲಜಸೋಮಣ್ಣ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಾಂಬಶಿವ, ಮರಳವಾಡಿ ಗ್ರಾಪಂ ಮಾಜಿ ಅಧ್ಯಕ್ಷ ಶಿವಶಂಕರ್, ಬಾಲನೇತ್ರ, ರಾಜೇಂದ್ರ, ಜೆಡಿಎಸ್ ಮುಖಂಡರಾದ ಬಿ.ನಾಗರಾಜು, ಸಿದ್ದಮರಿಗೌಡ, ಸ್ಟುಡಿಯೋಚಂದ್ರು, ರಾಜಗೋಪಾಲ್, ಮುಖಂಡರು, ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.
ರಾಜ್ಯದ ಏಳಿಗೆಗಾಗಿ ಮಠಗಳ ಕೊಡುಗೆ ಅನನ್ಯ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತು ನಾಡಿನ ಸಮಸ್ತ ಜನರ ಏಳಿಗೆಗಾಗಿ ರಾಜ್ಯದಲ್ಲಿ ಮಠಗಳ ಕೊಡುಗೆ ಅನನ್ಯವಾಗಿದೆ. ಜನಸಾಮಾನ್ಯರಿಗೆ ತನ್ನದೇ ಆದ ಬಹುದೊಡ್ಡ ಸೇವೆ ಮಾಡಿಕೊಂಡು ಮಠಗಳು ಬರುತ್ತಿರುವುದು ಶ್ಲಾಘನೀಯ.
ತುಮಕೂರು ಸಿದ್ಧಗಂಗಾ ಮಠದಿಂದ ಹಿಡಿದು ದೇಗುಲಮಠದಂತಹ ನೂರಾರು ಮಠಗಳು ಸ್ವತಂತ್ರ ಪೂರ್ವದಿಂದಲೂ ವಿದ್ಯಾರ್ಥಿಗಳಿಗೆ ಅಕ್ಷರ, ಅನ್ನ, ಜ್ಞಾನ ದಾಸೋಹ ಸೇವೆ ಸಲ್ಲಿಸುತ್ತಿವೆ. ತಾಲೂಕಿನ ಗಡಿಭಾಗದ ಸಣ್ಣ ಗ್ರಾಮದಲ್ಲಿ ಹುಟ್ಟಿ ದೇಗುಲಮಠದ ವಿದ್ಯಾರ್ಥಿಯಾಗಿ ಶಿಕ್ಷಣ ಪಡೆಯುವ ಮೂಲಕ ಈ ಮಟ್ಟಕ್ಕೆ ಬೆಳೆದುಬಂದಿದ್ದೇನೆ. ದೇಗುಲಮಠದ ಹುಚ್ಚಪ್ಪ ಸ್ವಾಮಿಗಳಿಂದ ಹಿಡಿದು ನಿರ್ವಾಣ, ಮಹಾಲಿಂಗಸ್ವಾಮೀಜಿಯ ಪವಾಡ ಪುರುಷರಾಗಿ ದಾಸೋಹದ ಮೂಲಕವೇ ತೀವ್ರ ಸಂಕಷ್ಟದಲ್ಲಿ ಮಠಗಳನ್ನು ಬೆಳೆಸಿ ಭಕ್ತರ ಸೇವೆಗಾಗಿಯೇ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆಖಾತೆಗಳ ರಾಜ್ಯಸಚಿವ ವಿ.ಸೋಮಣ್ಣ ಹೇಳಿದರು.