

ಮದ್ದೂರು: ನಗರದ ಶಿವಪುರ ಸತ್ಯಾಗ್ರಹ ಸೌಧದಲ್ಲಿ ಗುರುವಾರ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು.
ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಗಾಂಧಿ ಜಯಂತಿ ಹಾಗೂ ಶಾಸ್ತ್ರಿ ಅವರ ಜಯಂತಿಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ದೇಶ ಶೈಕ್ಷಣಿಕವಾಗಿ, ಆರ್ಥಿಕವಾಗಿ, ತಾಂತ್ರಿಕವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಗತಿ ಪಥದತ್ತ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಇದೇ ರೀತಿ ನಮ್ಮ ದೇಶವನ್ನು ಮತ್ತಷ್ಟು ಉನ್ನತ ಸ್ಥಿತಿಯತ್ತ ಕೊಂಡೊಯ್ಯುವ ಜವಾಬ್ದಾರಿ ನಮ್ಮದು ಎಂದರು.
ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ. ಚಂದು ಪುಷ್ಪಾರ್ಚನೆ ಮಾಡಿದರು. ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ನಗರಸಭೆ ಸದಸ್ಯರಾದ ಲತಾರಾಮು ಅವರನ್ನು ಎಂ.ಎಚ್. ಚನ್ನೇಗೌಡ ವಿದ್ಯಾಲಯ ವತಿಯಿಂದ ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ್, ನಗರಸಭಾಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಪ್ರಸನ್ನ, ಸದಸ್ಯೆ ಸರ್ವಮಂಗಳಾ, ಸಂಸ್ಥೆಯ ಗೌರವ ಅಧ್ಯಕ್ಷ ಕೆ.ಟಿ. ಚಂದು, ಅಧ್ಯಕ್ಷ ಎಂ.ಸ್ವರೂಪ್ ಚಂದ್, ಕಾರ್ಯದರ್ಶಿ ಸಿ.ಅಪೂರ್ವಚಂದ್ರು ಹಾಜರಿದ್ದರು.