

ಶ್ರೀರಂಗಪಟ್ಟಣ: ದೇಶದ ಗಡಿ ಹಾಗೂ ಭದ್ರತೆ ವಿಷಯದಲ್ಲಿ ರಾಜಕೀಯ ಬಿಟ್ಟು ಭಾರತೀಯರಾಗಿ ಒಗ್ಗಟ್ಟು ಪ್ರದರ್ಶಿಸಬೇಕೆಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ಶ್ರೀನಿಶ್ಚಲಾನಂದ ಸ್ವಾಮೀಜಿ ಸಲಹೆ ನೀಡಿದರು
ಪಟ್ಟಣದಲ್ಲಿ ಶನಿವಾರ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ರೈತ-ದಲಿತ ಸಂಘಟನೆಗಳ ಪದಾಧಿಕಾರಿಗಳು, ಕನ್ನಡ ಮತ್ತು ಪ್ರಗತಿ ಪರ ಹೋರಾಟಗಾರರೊಂದಿಗೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ವಿಜಯೋತ್ಸವದ ಬೃಹತ್ ತಿರಂಗಾ ಯಾತ್ರೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ದೇಶದ ಸೈನಿಕರು ಹಾಗೂ ಅವರು ನಡೆಸಿದ ಕಾರ್ಯಾಚರಣೆ ಬಗ್ಗೆ ಕೆಲವರು ಲಘುವಾಗಿ ಮಾತನಾಡುತ್ತಿರುವುದು ಸರಿಯಲ್ಲ. ಭಾರತದ ಅಸ್ಮಿತೆ ಕಾಯ್ದುಕೊಳ್ಳುವ ವಿಚಾರದಲ್ಲಿ ಕೇವಲ ಬಾಯಿಯ ಚಪಲಕ್ಕೆ ಮಾತನಾಡುವ ಅವರು ದೇಶಕ್ಕೆ ಹಾಗೂ ದೇಶದ ಸೈನಿಕರಿಗೆ ಗೌರವ ನೀಡುವುದನ್ನು ಕಲಿಯಬೇಕು. ನೆರೆಯ ಪಾಕಿಸ್ತಾನ ಉಗ್ರರನ್ನು ಪೋಷಣೆ ಮಾಡುವ ಮೂಲಕ ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದು, ದೇಶದ ಅಮಾಯಕ ಹಿಂದು ಪ್ರವಾಸಿಗರನ್ನು ಹತ್ಯೆಗೈದ ಉಗ್ರರಿಗೆ ಆಪರೇಷನ್ ಸಿಂಧೂರ ಮೂಲಕ ವೈಮಾನಿಕ ದಾಳಿ ಜತೆಗೆ ಭಾರತೀಯ ಸೈನಿಕರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಜತೆಗೆ ದೇಶದೊಳಗೇ ಇದ್ದು ದೇಶದ್ರೋಹಿ ಕೆಲಸಕ್ಕೆ ಮುಂದಾಗುತ್ತಿರುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ರೈತನಾಯಕ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಪಾಕಿಸ್ತಾನ ಪ್ರಚೋದಿತ ಉಗ್ರರ ಅಟ್ಟಹಾಸ ಮಿತಿ ಮೀರಿದ್ದು, ಅವರನ್ನು ಬುಡ ಸಮೇತ ಮಟ್ಟಹಾಕುವಲ್ಲಿ ನಮ್ಮ ಸೈನಿಕರಿಂದ ಮಾತ್ರ ಸಾಧ್ಯವಾಗಿದ್ದು, ಅವರಿಗೆ ಮುಕ್ತ ಅವಕಾಶ ನೀಡಬೇಕಿದೆ. ಸಮಸ್ತ ಭಾರತೀಯರು ನಮ್ಮ ಮಕ್ಕಳೊಂದಿಗೆ ನೆಮ್ಮದಿಯಿಂದ ಜೀವಿಸಲು ನಾವೆಲ್ಲರೂ ದೇಶದ ಸೈನಿಕರ ಜತೆಗೆ ನಿಲ್ಲುತ್ತೇವೆ ಎಂಬ ಬೆಂಬಲದೊಂದಿಗೆ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು ಎಂದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಮಾತನಾಡಿ, ಉಗ್ರ ಚಟುವಟಿಕೆಯನ್ನು ಪ್ರೋತ್ಸಾಹಿಸುತ್ತಿರುವ ಪಾಕಿಸ್ತಾನದ ನಡೆಯನ್ನು ತೀವ್ರವಾಗಿ ಖಂಡಿಸಿ, ಜಾಗತಿಕ ಮಟ್ಟದಲ್ಲಿ ಅವರನ್ನು ಒಬ್ಬಂಟಿಯಾಗಿಸಿ ಉಗ್ರ ಚಟುವಟಿಕೆಯನ್ನು ಸಂಪೂರ್ಣವಾಗಿ ಮಟ್ಟಹಾಕಬೇಕು ಎಂದರು. ಗೌತಮ ಕ್ಷೇತ್ರದ ಪೀಠಾಧಿಪತಿ ಶ್ರೀಗಜಾನನ ಸ್ವಾಮೀಜಿ ಸಹ ದನಿಗೂಡಿಸಿ ಭಾರತಕ್ಕಾಗಿ ಭಾರತೀಯರೆಲ್ಲರೂ ಒಂದಾಗಬೇಕು ಎಂದು ಕರೆ ನೀಡಿದರು.
ಇದಕ್ಕೂ ಮೊದಲು ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಮುಖ್ಯರಸ್ತೆಯಲ್ಲಿ ಭಾರತದ ಬಾವುಟದೊಂದಿಗೆ ಮೆರವಣಿಗೆ ನಡೆಸಿ ದೇಶದ ಸೈನಿಕರ ಪರ ಜೈಕಾರ ಕೂಗಿದರು. ತಿರಂಗಾ ಯಾತ್ರೆಯಲ್ಲಿ ಪುರಸಭಾ ಸದಸ್ಯರಾದ ಗಂಜಾಂ ಶಿವು, ಎಸ್.ಪ್ರಕಾಶ್, ಎಸ್.ಟಿ.ರಾಜು, ಜೆಡಿಎಸ್ ಮುಖಂಡ ಪೈ.ಮುಕುಂದ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಿ.ಶ್ರೀಧರ್, ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್, ಪ್ರಧಾನ ಕಾರ್ಯದರ್ಶಿ ಬಿ.ಸಂತೋಷ್ ಕುಮಾರ್, ಹಿಂದು ಜಾಗರಣಾ ವೇದಿಕೆಯ ಚಂದನ್, ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್ ಬಾಬು, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಚಂದಗಾಲು ಶಂಕರ್, ಅಖಿಲ ಕರ್ನಾಟಕ ಒಕ್ಕಲಿಗರ ವೇದಿಕೆ ಅಧ್ಯಕ್ಷ ಗೌಡಹಳ್ಳಿ ದೇವರಾಜು, ಕೆಂಪೇಗೌಡ ಯುವ ಶಕ್ತಿ ವೇದಿಕೆ ಮಹೇಶ್ ಮತ್ತಿತರರು ಭಾಗವಹಿಸಿ ಭಾರತಾಂಬೆ ಪರ ಜಯಘೋಷ ಮೊಳಗಿಸಿದರು.