

ಅಕ್ಕಿಆಲೂರ: ಭಾರತದ ಏಕತೆ, ಪ್ರಗತಿಗಾಗಿ ಸರ್ವಧರ್ಮ ಸದ್ಭಾವನೆ, ಮತೀಯ ಸಾಮರಸ್ಯ ಪ್ರಸ್ತುತ ದಿನಮಾನದಲ್ಲಿ ಅಗತ್ಯವಾಗಿದೆ ಎಂದು ಅಕ್ಕಿಆಲೂರ ಮುತ್ತಿನಕಂತಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಹಿರೂರ ಗ್ರಾಮದಲ್ಲಿ ಸೈಯದ್ ಮೊಹಮ್ಮದ್ ಗೌಸ್ ಶಾಹ ಖಾದ್ರಿ ಪ್ರಥಮ ವರ್ಷದ ಪುಣ್ಯಸ್ಮರಣೋತ್ಸವದ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಧಾರ್ವಿುಕ ಸದ್ಭಾವನಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಭಾರತೀಯರು ಧರ್ಮದ ಕಟ್ಟುಪಾಡುಗಳ ಹೊರತಾಗಿ ರಾಷ್ಟ್ರದ ಹಿತಚಿಂತನೆ ಮಾಡಬೇಕು. ಜಗತ್ತಿನ ಯಾವ ಧರ್ಮವೂ ದ್ವೇಷ ಬೋಧಿಸುವುದಿಲ್ಲ. ಪ್ರತಿ ಧರ್ಮದ ಇತಿಹಾಸ ಅವಲೋಕಿಸಿದಾಗ ಮಾನವೀಯ ಮೌಲ್ಯ ಮತ್ತು ನೈತಿಕ ನೆಲೆಗಟ್ಟಿನ ಮೇಲೆ ಧರ್ಮಗಳು ನಿಂತಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಜ್ಜಾದಾನಶೀನದ ಸೈಯದ್ ಮುರ್ತಜಾ ಅಲಿ ಶಾಹ ಹುಸೈನಿ ಮಾತನಾಡಿ, ಭಗವಂತನ ಸಾಕ್ಷಾತ್ಕಾರದಿಂದ ವ್ಯಕ್ತಿ ಧರ್ಮಕ್ಕೆ ಹತ್ತಿರವಾಗುತ್ತಾನೆ. ಬುದ್ಧ, ಬಸವ, ಪ್ರವಾದಿ ಮಹ್ಮದೀಯರು ಮಾನವ ಕಲ್ಯಾಣಕ್ಕೆ ಭೂಮಿಗೆ ಬಂದ ಯುಗಾವತಾರಿಗಳು ಎಂದರು.
ಬೆಂಗಳೂರು ಚನ್ನಬಸವೇಶ್ವರ ಜ್ಞಾನಪೀಠದ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಶಾಂತಿ ಹದಗೆಡಿಸಬೇಕು ಎನ್ನುವ ಉದ್ದೇಶದಿಂದಲೆ ಕೆಲ ಕಿಡಿಗೇಡಿಗಳು ಧರ್ಮದ ಹೆಸರಿನಲ್ಲಿ ಕಿತ್ತಾಡಿ, ಶ್ರೇಷ್ಠ ಧರ್ಮಗಳಿಗೆ ಕಪ್ಪು ಮಸಿ ಬಳಿಯುತ್ತಿದ್ದಾರೆ ಎಂದರು.
ವಕೀಲ ಯಾಸೀರ ಅರಾಫತ ಮಕಾನದಾರ ಆಶಯ ನುಡಿಗಳನ್ನಾಡಿದರು. ಮಹಾರಾಷ್ಟ್ರದ ಸೂಫಿ ಸೈಯದ್ ಶಾಹ ಹೈದರಪಾಷಾ, ವಿಜಯಪುರದ ಹಜರತ ಖಾಸಿಂ ಖಾದ್ರಿ, ರಾಯಚೂರಿನ ಸೈಯದ್ ಶಾಹ ಮುಹಿಯುದ್ದೀನ್ ಖಾದ್ರಿ, ಹಿರೂರ ಗ್ರಾಪಂ ಅಧ್ಯಕ್ಷ ಬಸವರಾಜ ತೊರವಂದ, ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಮಕಬೂಬ್ ಸರ್ಖಾಜಿ, ಹುಬ್ಬಳ್ಳಿಯ ದಾದಾಪೀರ್ಸಾಬ್ ಬಳ್ಳಾರಿ, ಗುಡ್ಡಪ್ಪ ಕಡಕೋಳ, ವೀರೇಶ ಬೈಲವಾಳ, ಹನುಮಂತಪ್ಪ ಕೋಟೆರ, ಶಂಕರಪ್ಪ ಕೊಣನವರ, ಫಕೀರಪ್ಪ ಕುರಬರ, ಬಸಯ್ಯ ಹಿರೇಮಠ ಇದ್ದರು.
ಫೋಟೋ-25ಎಕೆಆರ್01-ಅಕ್ಕಿಆಲೂರ ಸಮೀಪದ ಹಿರೂರ ಗ್ರಾಮದಲ್ಲಿ ಏರ್ಪಡಿಸಿದ್ದ ಧಾರ್ವಿುಕ ಸದ್ಭಾವನಾ ಸಮಾವೇಶವನ್ನು ಸೈಯದ್ ಮುರ್ತಜಾ ಅಲಿ ಶಾಹ ಹುಸೈನಿ ಉದ್ಘಾಟಿಸಿದರು. ಚಂದ್ರಶೇಖರ ಶಿವಾಚಾರ್ಯ ಶ್ರೀ, ಚನ್ನಬಸವಾನಂದ ಶ್ರೀ, ಯಾಸೀರ ಅರಾಫತ ಮಕಾನದಾರ ಇದ್ದರು.