ದೇಶದ ಅಭಿವೃದ್ಧಿಗೆ ಶೇ.50 ಮಕ್ಕಳ ಕೊಡುಗೆ

7ss1udgatane
Published on

ಶನಿವಾರಸಂತೆ: ದೇಶದ ಅಭಿವೃದ್ಧಿಗೆ ಶೇ.50 ಮಕ್ಕಳ ಕೊಡುಗೆ ಇದ್ದು, ಈ ನಿಟ್ಟಿನಲ್ಲಿ ಸರ್ಕಾರ, ಇಲಾಖೆ ಅಧಿಕಾರಿಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಮುಂದಾಗಬೇಕು ಎಂದು ನಾವು ಪ್ರತಿಷ್ಠಾನ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕಿ ಪಿ.ಸುಮನ್ ಮ್ಯಾಥ್ಯು ಅಭಿಪ್ರಾಯ ಪಟ್ಟರು.

ಸಮೀಪದ ನಿಡ್ತ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ನಿಡ್ತ ಗ್ರಾಮ ಪಂಚಾಯಿತಿ ಮತ್ತು ನಾವು ಪ್ರತಿಷ್ಠಾನ ಸಂಸ್ಥೆಯ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ನಿಡ್ತ ಗ್ರಾಪಂ ಮಟ್ಟದ ಮಕ್ಕಳ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು. ಮಕ್ಕಳ ಬುದುಕಿನ ಹಕ್ಕು ಶೂನ್ಯದಿಂದ ಪ್ರಾರಂಭವಾಗುತ್ತದೆ. ಮಕ್ಕಳ ರಕ್ಷಣೆ, ವಿಕಾಸ, ಭಾಗವಹಿಸುವಿಕೆ ಸೇರಿದಂತೆ ಹಲವು ಹಕ್ಕುಗಳಿವೆ. ಮಕ್ಕಳು ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಇನ್ನು ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಶೇ.50 ಇದೆ ಎಂದರು.

ದೇಶದ ಶೇ.45 ಮಕ್ಕಳು ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಆದರೆ, ಮಕ್ಕಳಿಗೆ ಹಲವು ಸಮಸ್ಯೆಗಳಿರುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ಗ್ರಾಮಸಭೆ ನಡೆಸಲಾಗುತ್ತದೆ. ಮಕ್ಕಳ ವೈಯಕ್ತಿಕ ಸಮಸ್ಯೆಗಳು, ಹಕ್ಕುಗಳ ರಕ್ಷಣೆಗೆ ಸರ್ಕಾರ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಕ್ಷಕರಾಗಿ ನಿಂತುಕೊಂಡರೆ ಮಾತ್ರ ಮಕ್ಕಳಿಗೆ ಸಮಸ್ಯೆಗಳು ಕಡಿಮೆಯಾಗಲಿವೆ ಎಂದರು.

ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯ, ಶಿಕ್ಷಣದ ಹಕ್ಕು, ಬಾಲ ಕಾರ್ಮಿಕ ತಡೆ, ಸಾಮಾಜಿಕ ಜಾಲತಾಣ ಪ್ರಭಾವ, ಪೋಕ್ಸೋ ಕಾಯ್ದೆ ಕುರಿತು ಕುಶಾಲನಗರ ಚೈಲ್ಡ್ ಲೈನ್ ಕೇಂದ್ರದ ಕಾರ್ಯಕರ್ತ ಯೋಗೇಶ್ ಮಾಹಿತಿ ನೀಡಿದರು.

ಮಕ್ಕಳ ಕಲ್ಯಾಣ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ಚಿಚಾರಕಿ ಸಾವಿತ್ರಮ್ಮ, ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಲ್ಕಿನ್ ಬಾನು ಮಾಹಿತಿ ನೀಡಿದರು.

ನಿಡ್ತ ಗ್ರಾಪಂ ಅಧ್ಯಕ್ಷ ಎಚ್.ಡಿ.ಮನು ಮತ್ತು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿ ದೇವಂತ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಕ್ಕಳು ತಮ್ಮ ಶಾಲೆಯಲ್ಲಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.

ಮುಳ್ಳೂರು ಸರ್ಕಾರಿ ಶಾಲೆ ವಿದ್ಯಾರ್ಥಿ ಯುಗನ್ ಮಾತನಾಡಿ, ಮಳೆಗಾಗದಲ್ಲಿ ಚರಂಡಿಯಿಂದ ಬಿಯರ್ ಬಾಟಲಿಗಳು, ತ್ಯಾಜ್ಯಗಳು ಹರಿದು ಬಂದು ಶಾಲಾ ಮುಂಭಾಗದಲ್ಲಿ ಸಂಗ್ರಹಗೊಳ್ಳುತ್ತವೆ ಎಂದು ಪ್ರಸ್ತಾಪಿಸಿದರು. ಗೋಪಾಲಪುರ ಸರ್ಕಾರಿ ಶಾಲೆ ಆವರಣದಲ್ಲಿ ರಾತ್ರಿ ಸಮಯದಲ್ಲಿ ಕುಡುಕರು ಶಾಲಾ ತಡಗೋಡೆ ಹಾರಿ ಶಾಲಾ ಆವರಣದಲ್ಲಿ ಬಾಟಲಿ, ಪ್ಲಾಸ್ಟಿ ಲೋಟ, ತ್ಯಾಜ್ಯಗಳನ್ನು ಬಿಸಾಕುತ್ತಾರೆ. ಬೆಳಗ್ಗೆ ನಾವು ಇದನ್ನು ಸ್ವಚ್ಛಗೊಳಿಸಬೇಕಾಗುತ್ತದೆ ಎಂದು ವಿದ್ಯಾರ್ಥಿನಿಯೊಬ್ಬಳು ಸಮಸ್ಯೆ ಹೇಳಿಕೊಂಡಳು.

ಮಕ್ಕಳ ಸಮಸ್ಯೆಗಳನ್ನು ಆಲಿಸಿದ ಪಿಡಿಒ ಮಾನಸ ಗ್ರಾಪಂನಿಂದ ಆಗುವ ಕೆಲಸಗಳನ್ನು ನಾವು ಮಾಡಿಕೊಡುತ್ತೇವೆ. ಉಳಿದ ಸಮಸ್ಯೆಗಳ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದರು.

ವಿವಿಧ ಶಾಲೆಯ ಮಕ್ಕಳಾದ ನಿತಿನ್, ದೀಪಿತಾ, ಪ್ರೇಕ್ಷಿತಾ, ದೀಕ್ಷಾ, ಶೋಭಿತಾ, ಹರ್ಷಿಣಿ, ಗ್ರಾಪಂ ಸದಸ್ಯರು, ನಾವು ಪ್ರತಿಷ್ಠಾನ ಸಂಸ್ಥೆಯ ಸ್ಥಾಪಕ ಗೌತಮ್ ಕಿರಗಂದೂರು, ಕಾರ್ಯಕರ್ತ ಪ್ರಜ್ವಲ್, ಕುಮಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net