

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ನೂತನ ದೇವಾಲಯ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಕೋಡಿ ಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರು ಸಾನ್ನಿಧ್ಯದಲ್ಲಿ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಲಾಯಿತು.
ಗ್ರಾಮದ ಯರೇಹಳ್ಳಿ ರಸ್ತೆಯಲ್ಲಿರುವ ಶ್ರೀ ಚನ್ನಬಸವೇಶ್ವರ ಚಿತ್ರಮಂದಿರ ಬಳಿ ಸ್ಥಾಪಿಸಲಾಗಿರುವ ಮೂಲಸ್ಥಾನ ಶ್ರೀ ಸ್ವರ್ಣಗೌರಿ ಅಮ್ಮನವರ ದೇವಾಲಯ ಆವರಣದಲ್ಲಿ ಗ್ರಾಮಸ್ಥರು, ಅಪಾರ ಭಕ್ತರ ಸಮ್ಮುಖದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಸೇವಾ ಸಮಿತಿ ಅಧ್ಯಕ್ಷ ಎಂ.ಎಸ್.ನಟರಾಜು ಮಾತನಾಡಿ, ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ವಾಸ್ತುಶಿಲ್ಪದ ಪ್ರಕಾರ ದೇವಾಲಯ ನಿರ್ಮಾಣ ಮಾಡಲಾಗುತ್ತಿದೆ. ಕೋಡಿಮಠದ ಪೀಠಾಧ್ಯಕ್ಷ ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಮಾರ್ಗದರ್ಶನದೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ. ಮುರುಡೇಶ್ವರದ ವಿನಾಯಕ್ ಮತ್ತು ತಂಡದವರು ದೇವಾಲಯ ನಿರ್ಮಾಣ ಮಾಡಲಿದ್ದಾರೆ. 2026ರ ಶ್ರಾವಣ ಮಾಸದ ಪಂಚಮಿಯಂದು ಲೋಕಾರ್ಪಣೆಗೊಳ್ಳಲಿದೆ. ಭಕ್ತರಿಗೆ ಮೂಲಸೌಲಭ್ಯಗಳೊಂದಿಗೆ ಸುಸಜ್ಜಿತ ಸೇವೆ ನೀಡುವುದು ಸಮಿತಿ ಆಶಯವಾಗಿದೆ ಎಂದರು.
ಶ್ರೀ ಚನ್ನಬಸವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ರಾಜು ಶಾಸ್ತ್ರಿ, ರಾಜು, ವೀರಭದ್ರ ಶಾಸ್ತ್ರಿ ಮತ್ತು ತಂಡದಿಂದ ಪೂಜಾ ಕೈಂಕರ್ಯಗಳು ನೆರವೇರಿದವು. ಸೇವಾ ಸಮಿತಿ ಗೌರವಾಧ್ಯಕ್ಷ ಮಲ್ಲಿಕಾರ್ಜುನಪ್ಪ , ಕಾರ್ಯದರ್ಶಿ ನಂದೀಶ್, ಮಹದೇವಪ್ಪ, ಮುಖಂಡರಾದ ಎಂ.ಸಿ. ನಟರಾಜ್, ಕೊಡ್ಲಿ ಬಸವರಾಜ್, ಅಶೋಕ್, ಎಂ.ಎಸ್.ಮರುಳೇಗೌಡ, ಎಂ.ಜೆ.ಶಿವಣ್ಣ, ಯೋಗೀಶ್, ಎಂ.ಟಿ.ಲೋಕೇಶ್, ದುಮ್ಮೇನಹಳ್ಳಿ ಶಂಕ್ರಪ್ಪ , ಹೊಸಹಳ್ಳಿ ಎಚ್.ಎಂ.ಸಂತೋಷ್, ಮಾಡಾಳು ಶಿವಲಿಂಗಪ್ಪ, ಚಂದ್ರಪ್ಪ, ಕಟ್ಟೆ ತಿಮ್ಮಯ್ಯ, ಎಂ.ಡಿ.ಸೋಮಶೇಖರ್, ದಾಸಪ್ಪ ಇದ್ದರು.