ದೇವಾನು ದೇವತೆಗಳಿಂದ ಇಲ್ಲಿ ಮಾಘ ಸ್ನಾನ!!

1111111
Published on

ವಿಜಯವಾಣಿ ಸುದ್ದಿಜಾಲ ಕಾರವಾರ

ಮಾಘ ಅಮವಾಸ್ಯೆಯ ಅಂಗವಾಗಿ ಶ್ರದ್ಧಾಳುಗಳು ಸಮುದ್ರ ಸ್ನಾನ ಮಾಡುವುದು ವಾಡಿಕೆ. ಆದರೆ, ಇಲ್ಲಿ ದೇವಾನು ದೇವತೆಗಳೂ ಸಮುದ್ರ ಸ್ನಾನ ಮಾಡಿದರು. ಮಾಜಾಳಿಯ ರಾಮನಾಥ ದೇವರು ಹಾಗೂ ಆರು ಪರಿವಾರ ದೇವರನ್ನು ಛತ್ರ, ಚಾಮರ, ವಾದ್ಯ ಮೇಳಗಳೊಂದಿಗೆ ಸೋಮವಾರ ಪಲ್ಲಕ್ಕಿಯಲ್ಲಿ ಮಾಜಾಳಿ ಕಡಲ ತೀರಕ್ಕೆ ತಂದು ಸಮುದ್ರ ಸ್ನಾನ ಮಾಡಿಸಿ, ಪೂಜಿಸಿ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಸೇರುವುದರಿಂದ ಇಲ್ಲಿ ದೊಡ್ಡ ಜಾತ್ರೆಯೇ ನೆರೆದಿತ್ತು.
ಸೋಮವಾರ ಮಾಜಾಳಿ ಕಡಲ ತೀರದಲ್ಲಿ ಭಕ್ತರು ಸಮುದ್ರದಲ್ಲಿ ಮಿಂದೆದ್ದರು. ಯುವಕರು ಮಾನವ ಫಿರಮಿಡ್ ಮಾಡಿ ಖುಷಿಪಟ್ಟರು. ಮರಳಿನ ಶಿವ ಲಿಂಗ ಮಾಡಿ ಭಕ್ತಿ ಮೆರೆದರು. ಅಷ್ಟೊತ್ತಿಗಾಗಲೇ ದಡಕ್ಕೆ ಪಲ್ಲಕ್ಕಿಯಲ್ಲಿ ಬಂದ ದೇವರಿಗೆ ಹಣ್ಣು, ಕಾಯಿ ಮಾಡಿಸಿ ಪೂಜೆ ಸಲ್ಲಿಸಿದರು. ಕೆಲವರು ಅರ್ಚಕರ ಮಾರ್ಗದರ್ಶನದಲ್ಲಿ ಪಿಂಡ ಪ್ರಧಾನ ಮಾಡಿದರು. ವಾಪಸ್ ತೆರಳುವ ರಸ್ತೆಯ ಇಕ್ಕೆಲಗಳಲ್ಲಿ ಹಾಸಿಟ್ಟ ಸೀರೆಯಲ್ಲಿ ಪಡಿ (ಅಕ್ಕಿ ಹಾಗೂ ಇತರ ಧಾನ್ಯ)ಬೀರುತ್ತ ಸಾಗಿದರು. ಗೋವಾ ಭಾಗದಿಂದಲೂ ಸಾಕಷ್ಟು ಭಕ್ತರು ಆಗಮಿಸಿದ್ದರು.

ಏಕೆ ಈ ಮಾಘ ಸ್ನಾನ..?

ತಾಲೂಕಿನ ಕಡಲ ತೀರಗಳಲ್ಲಿ ಸಾವಿರಾರು ಶ್ರದ್ಧಾಳುಗಳು ಸೋಮವಾರ ಸಮುದ್ರ ಸ್ನಾನ ಮಾಡಿ ಕೃತಾರ್ಥರಾದರು. ಮಾಘ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನ ಸಮುದ್ರ ಸ್ನಾನ, ಅರ್ಹರಿಗೆ ದಾನ ಹಾಗೂ ಪಿಂಡ ಪ್ರದಾನ ಮಾಡುವುದರಿಂದ ಪಾಪಗಳು ಪರಿಹಾರವಾಗುತ್ತವೆ. ಸಾಮಾನ್ಯ ದಿನಕ್ಕಿಂತ ಹೆಚ್ಚಿನ ಪುಣ್ಯ ಪ್ರಾಪ್ತವಾಗುತ್ತದೆ. ಪಿಂಡ ಪ್ರಧಾನದಿಂದ ಪಿತೃದೋಷ ಪರಿಹಾರವಾಗುತ್ತದೆ ಎಂಬುದು ಹಿಂದು ಶ್ರದ್ಧಾಳುಗಳ ನಂಬಿಕೆ. ಈ ಹಿನ್ನೆಲೆಯಲ್ಲಿ ಕಾರವಾರ ಟ್ಯಾಗೋರ್ ಕಡಲತೀರ, ದೇವಬಾಗ, ಮಾಜಾಳಿ ಹೀಗೆ ಎಲ್ಲೆಡೆ ಕಡಲಲ್ಲಿ ಜನ ಮಿಂದೆದ್ದರು. ಅಕ್ಕಿಯನ್ನು ದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net