

ಬಾಗಲಕೋಟೆ: ಹಿಂದು ಧರ್ಮಕ್ಕೆ ಪ್ರತ್ಯೇಕ ಸಂವಿಧಾನ ತರಬೇಕಾದರೆ ಮೊದಲು ಅವರು ಈ ಧರ್ಮದಲ್ಲಿ ಇರುವ ಇರುವಂತವರನ್ನು ಗಣನೆಗೆ ತೆಗೆದುಕೊಳ್ಳಬೇಕು. ಹಿಂದು ಧರ್ಮದಲ್ಲಿ ಇರುವ ಎಷ್ಟೋ ಜನರಿಗೆ ಇವತ್ತಿಗೂ ದೇವಸ್ಥಾನಕ್ಕೆ ಪ್ರವೇಶ ಇಲ್ಲ, ಅಸ್ಪÈಶ್ಯತೆ ನಿಂತಿಲ್ಲ. ಮೊದಲು ಈ ಬಗ್ಗೆ ಅವರು ಮಾತನಾಡಲಿ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಮಹಾ ಕುಂಭಮೇಳದಲ್ಲಿ ಹಿಂದು ಧರ್ಮಕ್ಕೆ ಪ್ರತ್ಯೇಕ ಸಂವಿಧಾನ ರಚನೆ ಆಗಬೇಕು ಎನ್ನುವ ವಿಚಾರ ಪ್ರಸ್ತಾಪದ ಬಗ್ಗೆ ಸೋಮವಾರ ಬಾಗಲಕೋಟೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದು ಧರ್ಮಕ್ಕೆ ಪ್ರತ್ಯೇಕ ಸಂವಿಧಾನ ತರುತ್ತಿದ್ದೇವೆಯಲ್ಲ, ಮೊದಲು ಅಸ್ಪÈಶ್ಯತೆ ಹೋಗಲಾಡಿಸುತ್ತೇವೆ. ಇಲ್ಲಿ ಎಲ್ಲ ದೇವಸ್ಥಾನಗಳಲ್ಲಿ ಎಲ್ಲರಿಗೂ ಪ್ರವೇಶ ನೀಡುತ್ತೇವೆ. ಸರ್ವರನ್ನು ಸಮಾನ ದೃಷ್ಟಿಯಿಂದ ನೋಡುವಂತ ಧರ್ಮವನ್ನು ನಾವು ತರುತ್ತೇವೆ ಎಂದು ಹೇಳಿದರೆ ಎಲ್ಲರೂ ಒಪ್ಪುತ್ತಾರೆ ಎಂದರು.
ಯಾವುದೇ ಒಂದು ಧರ್ಮವನ್ನು ದ್ವೇಷಿಸುವುದು, ಯಾವುದೇ ಒಂದು ಜಾತಿಯನ್ನು ದ್ವೇಷಿಸುವುದಕ್ಕಾಗಿ ಸಂವಿಧಾನ ಇಲ್ಲ. ಸಂವಿಧಾನವನ್ನು ತಿದ್ದಬೇಕಾದರೆ ಮೂಢನಂಬಿಕೆಗಳು, ಜಾತಿ ವ್ಯವಸ್ಥೆ, ಶ್ರೇಣಿಕೃತ ವ್ಯವಸ್ಥೆ ಬಗ್ಗೆ ಹೇಳಬೇಕು. ಮಾನವರನ್ನು ಮಾನವರನ್ನಾಗಿ ಕಾಣುವಂತ ಧರ್ಮ ಬೇಕಾಗಿದೆ ವಿನಃ ಮಾನವರನ್ನು ಪಶುಗಳಾಗಿ ಕಾಣುವ ಧರ್ಮ ಯಾರಿಗೂ ಬೇಕಾಗಿಲ್ಲ. ಇದನ್ನು ಜನತೆ ಚರ್ಚೆ ಮಾಡುತ್ತಾರೆ. ಇದು ಅವರು ಗಮನಕ್ಕೆ ಇದೆಯೋ ಇಲ್ಲವೋ ಗೊತ್ತಿಲ್ಲ. ಇದನ್ನು ಮೊದಲು ಸುಧಾರಣೆ ಮಾಡಿ ಹಿಂದು ಸಂವಿಧಾನ ತೆಗೆದುಕೊಂಡು ಬನ್ನಿ ಎಂದು ಸಚಿವ ತಿಮ್ಮಾಪುರ ಸಲಹೆ ನೀಡಿದರು.