

ಶಿರಸಿ: ಜನರಿಗೆ ದೇಶೀಯ ಹಾಗೂ ಪಾಶ್ಚಾತ್ಯ ಭತ್ತದ ತಳಿಗಳ ಪರಿಚಯ ಹಾಗೂ ಅಧ್ಯಯನದ ಉದ್ದೇಶದಿಂದ ರೈತರೊಬ್ಬರು ಒಂದು ಎಕರೆ ಕ್ಷೇತ್ರದಲ್ಲಿ 200ಕ್ಕೂ ಹೆಚ್ಚು ಭತ್ತದ ತಳಿ ಬೆಳೆಸಿ ಗಮನ ಸೆಳೆದಿದ್ದಾರೆ.
ತಾಲೂಕಿನ ದೇವತೆಮನೆಯ ರಾಮಕೃಷ್ಣ ಭಟ್ಟ ಭತ್ತದ ತಳಿ ಸಂರಕ್ಷಣೆಯ ಕಾರ್ಯ ಮಾಡುತ್ತಿದ್ದಾರೆ. ಮೂಲತಃ ಅಡಕೆ ಕೃಷಿಕರಾದ ಭಟ್ಟರಿಗೆ ಇರುವುದು ಒಂದು ಎಕರೆ ಗದ್ದೆ ಮಾತ್ರ. ಇರುವ ಇಷ್ಟೇ ಜಾಗದಲ್ಲಿ ಎಲ್ಲ ಮಾದರಿಯ ತಳಿಯ ಭತ್ತವನ್ನು ಬೆಳೆಸಿದ್ದಾರೆ. ಒಂದು ಕೃಷಿ ವಿಶ್ವವಿದ್ಯಾಲಯ ಮಾಡಬೇಕಾದ ಕಾರ್ಯವನ್ನು ಭಟ್ಟರು ಒಬ್ಬರೆ ಮಾಡುತ್ತಿದ್ದಾರೆ.
ಅರಿವಿನ ಉದ್ದೇಶ: ಭಟ್ಟರ ಗದ್ದೆಯಲ್ಲಿ ಆಲೂರಸಣ್ಣ, ಚಳ್ಳ ಭತ್ತ, ಜಡ್ಡ ಭತ್ತ, ನೀರ ಮುಳಗ, ಗಂಧಸಾಲಿ, ಅಮೃತ, ಉಮಾ, ಗೌರಿ, ಪದ್ಮರೇಖ, ಮಟ್ಟಳಗ, ಬಾಸುಮತಿ, ಗುಲ್ವಾಡಿ, ಸೋನಾಮಸೂರಿ, ಕರಿ ಕಂಟಕ ಅಲ್ಲದೆ, ವಿದೇಶಿ ತಳಿಗಳಾದ ಥೈಲ್ಯಾಂಡ್ ಭತ್ತ, ಅಂಬೆ ಮೊಹಲಿ ಹೀಗೆ ಹಲವು ತಳಿಗಳು ಕಾಣಿಸಿಗುತ್ತದೆ. ಪಾರಂಪರಿಕ ತಳಿಗಳ ಸಂರಕ್ಷಣೆ, ಮುಂದಿನ ಜನಾಂಗಕ್ಕೆ ಇವುಗಳ ಅರಿವು ಇರುವಂತೆ ಮಾಡುವುದು ಇವರ ಶ್ರಮದ ಹಿಂದಿನ ಉದ್ದೇಶವಾಗಿದೆ.
ಎಲ್ಲವೂ ದಾಖಲೀಕರಣ: ನೂರಾರು ತಳಿಯ ಭತ್ತ ಸಂಗ್ರಹಿಸಲು ರಾಜ್ಯಾದ್ಯಂತ ಸಂಚರಿಸಿದ್ದಾರೆ. ಇವರ ಗದ್ದೆಯಲ್ಲಿ ಪ್ರತಿಯೊಂದು ತಳಿ 2ಗಿ2 ಅಂತರದಲ್ಲಿ ಪ್ರತ್ಯೇಕವಾಗಿ ಬೆಳೆಸಲಾಗಿದೆ. ಗದ್ದೆಯಲ್ಲಿ ಯೇ ಪ್ರತಿಯೊಂದು ತಳಿಗೆ ಸಂಖ್ಯೆಯನ್ನು ಹಾಕಿದ್ದಾರೆ. ಒಂದರಿಂದ ಎರಡು ನೂರಾ ಅರವತ್ತರವರೆಗೂ ಪ್ರತ್ಯೇಕವಾದ ತಳಿಗಳಿವೆ. ಅವುಗಳ ಬಗ್ಗೆ ವಿವರಗಳನ್ನು ತಮ್ಮ ಡೈರಿಯಲ್ಲಿ ಸಂಖ್ಯೆಗೆ ಅನುಗುಣವಾಗಿ ದಾಖಲಿಸಿದ್ದಾರೆ. ಕೆಂಪು ಅಕ್ಕಿ, ಕಪ್ಪು ಅಕ್ಕಿ, ಔಷಧಕ್ಕಾಗಿ ಬಳಸುವ ಅಕ್ಕಿ, ಸುವಾಸನೆಭರಿತ ಅಕ್ಕಿಯ ತಳಿ ಇವರ ಬಳಿಯಿದೆ. 65 ತಳಿಗಳ ಹೆಸರು ಇನ್ನಷ್ಟೇ ಅಧ್ಯಯನದಿಂದ ತಿಳಿದು ಬರಬೇಕಿದೆ.
ದೇಶೀಯ ಹಳೆಯ ತಳಿಗಳು, ಹೊಸ ತಳಿಗಳು ಹಾಗೂ ವಿದೇಶಿ ತಳಿಗಳ ಪರಿಚಯ ಜನರಿಗೆ ಮಾಡಿಸುವ ಸಲುವಾಗಿ ಭತ್ತ ಬೆಳೆಸಲಾಗುತ್ತಿದೆ. ಇಲ್ಲಿ ಲಾಭದ ಲೆಕ್ಕಾಚಾರ ಇಲ್ಲ. ಯಾವ ತಳಿ ಯಾವ ರೀತಿಯಿಂದ ಅನುಕೂಲ ಅದಕ್ಕೆ ಬರುವ ರೋಗಗಳು ಏನು? ಇದನ್ನು ಹೇಗೆ ಸಂರಕ್ಷಿಸಬಹುದು ಎಂಬ ಅಧ್ಯಯನಕ್ಕೆ ಈ ಭತ್ತದ ಗದ್ದೆ ಪ್ರಯೋಗಾಲಯವಾಗಿದೆ.| ರಾಮಕೃಷ್ಣ ಭಟ್ಟಭತ್ತದ ತಳಿ ಸಂರಕ್ಷಕ, ದೇವತೆಮನೆ