

ಮದ್ದೂರು: ದೇವಾಲಯದಲ್ಲಿ ಗ್ರಂಥಾಲಯ ನಿರ್ಮಿಸುವ ಮೂಲಕ ಶ್ರದ್ಧಾಭಕ್ತಿಯ ಜತೆಗೆ ಜ್ಞಾನ ನೀಡುವ ವಿನೂತನ ಪ್ರಯತ್ನಕ್ಕೆ ಸಮಾಜ ಸೇವಕ ಸತೀಶ್, ಭಕ್ತರು ಹಾಗೂ ದಾನಿಗಳು ಮುಂದಾಗಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಪಟ್ಟಣದ 11ನೇ ವಾರ್ಡಿನ ಬಸವೇಶ್ವರ ನಗರದಲ್ಲಿರುವ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಗ್ರಂಥಾಲಯ ಆರಂಭಿಸುವ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ದೇವಾಲಯದ ಆವರಣದಲ್ಲಿ 4085ರ ಅಳತೆಯಲ್ಲಿ ಗ್ರಂಥಾಲಯ ನಿರ್ಮಾಣ ಮಾಡುತ್ತಿದ್ದು, ಇಲ್ಲಿ ಆಧ್ಯಾತ್ಮಿಕ, ಧಾರ್ಮಿಕ, ಸ್ಪರ್ಧಾತ್ಮಕ, ರಸಪ್ರಶ್ನೆ ಸೇರಿದಂತೆ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವ ಸ್ಪರ್ಧಾರ್ಥಿಗಳು ಹಾಗೂ ಎಲ್ಲ ವರ್ಗದವರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳು ಸಿಗುವ ರೀತಿಯ ಗ್ರಂಥಾಲಯ ನಿರ್ಮಿಸಲು ಮುಂದಾಗಿದ್ದಾರೆ.
ಗ್ರಂಥಾಲಯವನ್ನು ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಹಾಗೂ ಹಿರಿಯ ಸಾಹಿತಿ ಪ್ರೊ.ಕೃಷ್ಣೇಗೌಡ ಅವರಿಂದ ಉದ್ಘಾಟಿಸಬೇಕೆಂದು ತೀರ್ಮಾನಿಸಿದ್ದು, ಅವರು ಉದ್ಘಾಟನೆಗೆ ಕಾಲಾವಕಾಶ ನೀಡಿದ ತಕ್ಷಣ ಗ್ರಂಥಾಲಯ ಲೋಕಾರ್ಪಣೆಗೊಳ್ಳಲಿದೆ ಎನ್ನುತ್ತಾರೆ ಸಮಾಜ ಸೇವಕ ಸತೀಶ್.
ಪ್ರಸ್ತುತ ದಿನಗಳಲ್ಲಿ ಯುವ ಜನಾಂಗ ಹಗಲು-ಇರುಳೆನ್ನದೆ ಮೊಬೈಲ್‌ನಲ್ಲಿ ಕಳೆಯುತ್ತಿರುವ ದಿನಗಳಲ್ಲಿ ಓದುವ ಹವ್ಯಾಸ ಹುಟ್ಟುಹಾಕಲು ಗ್ರಂಥಾಲಯ ನಿರ್ಮಾಣಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ.
ದೇವಾಲಯಗಳಿಗೆ ಹೋಗಿ ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿದರೆ ಮನಸಿಗೆ ನೆಮ್ಮದಿ ಸಿಗುತ್ತದೆ ಎಂಬುದು ಭಕ್ತರ ನಂಬಿಕೆ. ಇದರ ಜತೆಗೆ ದೇವಾಲಯಗಳಲ್ಲಿ ಗ್ರಂಥಾಲಯ ನಿರ್ಮಾಣ ಮಾಡಿದರೆ ಜ್ಞಾನಾರ್ಜನೆಗೆ ಅನುಕೂಲವಾಗುತ್ತದೆ. ಇದೇ ರೀತಿ ಎಲ್ಲ ದೇವಾಲಯಗಳಲ್ಲಿ ನಿರ್ಮಾಣ ಮಾಡಿದರೆ ಉತ್ತಮ.
ದೇವಾಲಯದ ನಿರ್ಮಾಣಕ್ಕೆ ಸ್ವಂತ ಸ್ಥಳವನ್ನು ಉಚಿತವಾಗಿ ನೀಡಿದ್ದು, ಗ್ರಂಥಾಲಯ ನಿರ್ಮಾಣಕ್ಕೆ 3 ಲಕ್ಷ ರೂ.ಗಳನ್ನು ವೈಯಕ್ತಿಕವಾಗಿ ಖರ್ಚು ಮಾಡಿದ್ದೇನೆ. ದಾನಿಗಳ ಸಹಾಯದಿಂದ ಸುಸಜ್ಜಿತವಾದ ಹಾಗೂ ಓದುಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಮುಂದಾಗಿದ್ದೇನೆ. ನಾನು ಹೆಚ್ಚು ಓದಿಲ್ಲ. ಆದ್ದರಿಂದ ವಿದ್ಯಾರ್ಥಿಗಳಿಗೆ, ಯುವಕರಿಗೆ, ನಿರುದ್ಯೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ದಾನಿಗಳ ಸಹಾಯ ಪಡೆದು ಗ್ರಂಥಾಲಯ ನಿರ್ಮಾಣ ಮಾಡುತ್ತಿದ್ದು, ಈ ಕೈಂಕರ್ಯಕ್ಕೆ ದಾನಿಗಳು ಸಹಾಯ ಮಾಡಬೇಕು. ದೇವಾಲಯದಲ್ಲಿ ಗ್ರಂಥಾಲಯ ನಿರ್ಮಾಣಮಾಡುತ್ತಿರುವುದು ನನಗೆ ಅತೀವ ಸಂತೋಷವಾಗಿದೆ.
ಸತೀಶ್, ಸಮಾಜ ಸೇವಕ