ದೇಗುಲದ ಆಸ್ತಿ ಉಳಿಸುವಂತೆ ಪಟ್ಟು

FotoJet
Published on

ಅವ್ವೇರಹಳ್ಳಿ ರೇವಣಸಿದ್ದೇಶ್ವರ ದೇವಾಲಯ ಮುಂಭಾಗ ಸ್ಥಳೀಯರ ಪ್ರತಿಭಟನೆ

 ಕೈಲಾಂಚ : ದೇಗುಲದ ಆಸ್ತಿ ಉಳಿಸುವಂತೆ ಒತ್ತಾಯಿಸಿ ಕೈಲಾಂಚ ಹೋಬಳಿಯ ಅವ್ವೇರಹಳ್ಳಿ ರೇವಣಸಿದ್ದೇಶ್ವರ ದೇವಾಲಯದ ಆಡಳಿತ ಕಚೇರಿ ಮುಂಭಾಗ ಮಂಗಳವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಖಾಸಗಿ ವ್ಯಕ್ತಿಯೊಬ್ಬರು ಜಮೀನಿನ ಅಭಿವೃದ್ಧಿ ಜತೆಗೆ ದೇವಾಲಯದ ಆಸ್ತಿಯನ್ನು ಒತ್ತುವರಿ ಮಾಡಿಕೊಂಡು ಆ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆಸ್ತಿ ಉಳಿಸಲು ತಾಲೂಕು ಆಡಳಿತ, ದೇವಾಲಯದ ಆಡಳಿತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ನಿರತ ಆನಂದ್ ಮಾತನಾಡಿ, ದೇವಾಲಯಕ್ಕೆ ಸುಮಾರು 60 ಎಕರೆಗೂ ಹೆಚ್ಚಿನ ಆಸ್ತಿ ಇದೆ. ಆದರೆ ಖಾಸಗಿ ವ್ಯಕ್ತಿಯೊಬ್ಬರ ಜಮೀನು ದೇವಾಲಯದ ಜಮೀನಿಗೆ ಹೊಂದಿಕೊಂಡಂತಿದ್ದು, ಅವರ ಜಮೀನು ಅಭಿವೃದ್ಧಿ ಮಾಡುವ ಜತೆಗೆ ದೇವಾಲಯದ ಜಮೀನನ್ನು ಅಕ್ರಮಿಸಿಕೊಂಡು ಜಮೀನಿನಲ್ಲಿದ್ದ ಕಲ್ಲುಬಂಡೆಯನ್ನು ಯಾರ ಅನುಮತಿಯನ್ನೂ ಪಡೆಯದೆ ಒಡೆದಿದ್ದಾರೆ. ಜತೆಗೆ ಗಿಡ ಮರ ಕತ್ತರಿಸಿದ್ದಾರೆ ಎಂದು ಆರೋಪಿಸಿದರು.

ಈಗಾಗಲೇ ತಹಸೀಲ್ದಾರ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಅಳತೆ ಆಗುವವರೆಗೆ ಕೆಲಸ ನಿರ್ವಹಿಸದಂತೆ ತಿಳಿಸಿದ್ದರೂ ಮಂಗಳವಾರ ಜೆಸಿಬಿ, ಟ್ರ್ಯಾಕ್ಟರ್ ತಂದು ಕೆಲಸ ಮಾಡಿದ್ದಾರೆ ಎಂದು ದೂರಿದರು.

ಮಾತಿನ ಚಕಮಕಿ

ಪ್ರತಿಭಟನಾ ವಿಷಯ ತಿಳಿದು ಸ್ಥಳಕ್ಕೆ ಬಂದ ಕೈಲಾಂಚ ಉಪ ತಹಸೀಲ್ದಾರ್ ರುದ್ರಮ್ಮ, ರಾಜಸ್ವ ನಿರೀಕ್ಷಕ ಪುಟ್ಟರಾಜು, ಸರ್ವೇಯರ್ ಬಲರಾಮ್, ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ಕೆ.ಕೆ. ರೂಪಾ ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಅಳತೆ ಮಾಡಲಾಯಿತು. ಈ ವೇಳೆ ಖಾಸಗಿ ವ್ಯಕ್ತಿ ಮತ್ತು ಸ್ಥಳೀಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ರಾಮನಗರ ಗ್ರಾಮಾಂತರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಸರ್ವೇಯರ್ ಜಾಗ ಗುರುತಿಸಿಕೊಟ್ಟರು.

ಎ.ಸಿ. ಕೆಂಪಯ್ಯ, ತಮ್ಮಣ್ಣ, ಗಂಗಾಧರ್, ಸಂಜಯ್, ನಾಗೇಂದ್ರನಾಯ್ಕ, ಕುಮಾರ್, ಆನಂದ್, ವಿಜಿ, ರಾಜು, ಸತೀಶ್, ನರಸಿಂಹಯ್ಯ, ಎಲ್ಲೇಗೌಡ, ಕಿರಣ್ ಮುಂತಾದವರಿದ್ದರು.

ಸಾರ್ವಜನಿಕರಿಂದ ಮನವಿ ಬಂದ ತಕ್ಷಣವೇ ತಹಸೀಲ್ದಾರ್ ಅವರಿಗೆ ದೇವಾಲಯದ ಜಮೀನು ಅಳತೆ ಮಾಡಿಸಿಕೊಡುವಂತೆ ಮನವಿ ಮಾಡಲಾಗಿತ್ತು. ಇಂದು ಸರ್ವೇಯರ್ ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಅಳತೆ ಮಾಡಿ, ದೇವಾಲಯದ ಆಸ್ತಿ ಹದ್ದುಬಸ್ತು ಗುರುತಿಸಲಾಗಿದೆ. ಆದರೆ, ಡಿಜಿಟಲ್ ಸರ್ವೇ ಮಾಡಿಸಿ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಮುನ್ನಡೆಯುತ್ತೇವೆ. | ಕೆ.ಕೆ. ರಮ್ಯಾ ಶ್ರೀ ರೇವಣಸಿದ್ದೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net