

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ೨೦೨೪-೨೫ರ ಶೈಕ್ಷಣಿಕ ವರ್ಷದಿಂದ ಮಾಸ್ಟರ್ ಆಫ್ ವಿಜುವಲ್ ಆರ್ಟ್ಸ್ (ಎಂವಿಎ) ಕೋರ್ಸ್ ಪ್ರಾರಂಭಿಸಿದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರನ್ನು ಕಲಾವಿದರು ಬುಧವಾರ ಸತ್ಕರಿಸಿದರು.
ಕಲಬುರಗಿ ಚೈತನ್ಯ ಆರ್ಟ್ ಗ್ಯಾಲರಿ ಸಂಸ್ಥಾಪಕ ಡಾ.ಎ.ಎಸ್. ಪಾಟೀಲ್ ಮಾತನಾಡಿ, ಕಲಬುರಗಿಗೆ ಕಲೆಯಲ್ಲಿ ವಿಶೇಷ ಸ್ಥಾನವಿದೆ. ಡಾ.ಎಸ್.ಎಂ. ಪಂಡಿತ ಅವರಂತಹ ಮಹಾನ್ ಕಲಾ ತಪಸ್ವಿಗಳನ್ನು ಈ ನಾಡು ನೀಡಿದೆ. ಇಂತಹ ಪ್ರದೇಶದಲ್ಲಿ ದೃಶ್ಯ ಕಲೆಯಲ್ಲಿ ಸ್ನಾತಕೋತ್ತರ ಪದವಿ ಪ್ರಾರಂಭಿಸಿರುವುದು ಹೆಮ್ಮೆಯ ವಿಷಯ ಎಂದರು.
ಡಾ.ಎಸ್.ಎಂ. ಪಂಡಿತ ಕಲಾಕೃತಿಗಳ ಕುರಿತ ಪುಸ್ತಕ ಸ್ವೀಕರಿಸಿದ ಕುಲಪತಿ ಪ್ರೊ.ಬಟ್ಟು ಮಾತನಾಡಿ, ಭಾರತೀಯ ಸಮಾಜ ಮತ್ತು ಸಂಸ್ಕೃತಿಯಲ್ಲಿ ಕಲೆಗೆ ವಿಶೇಷ ಸ್ಥಾನವಿದೆ. ಇಂತಹ ಮಹಾನ್ ಪಂಡಿತರ ಕೊಡುಗೆ ಅನನ್ಯ. ನಮ್ಮ ವಿಶ್ವವಿದ್ಯಾಲಯದಲ್ಲಿ ಕಲಾ ಗ್ಯಾಲರಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಸಂಗೀತ ಮತ್ತು ಲಲಿತ ಕಲಾ ವಿಭಾಗಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸುವುದಾಗಿ ತಿಳಿಸಿದರು.
ಕಲಾವಿದರಾದ ಡಾ.ವಿ.ಬಿ. ಬಿರಾದಾರ್, ದಿ ಆರ್ಟ್ ಇಂಟಿಗ್ರೇಶನ್ ಕಲಾ ಕಾಲೇಜು ಪ್ರಾಚಾರ್ಯ ಡಾ.ಪತ್ರಜಾತ ಬೆಳಮಗಿ, ಡಾ.ಪರಸುರಾಮ ಪಿ., ಸಿಯುಕೆಯ ಕಲಾ ನಿಕಾಯದ ಡೀನ್ ಪ್ರೊ.ವಿಕ್ರಮ ವಿಸಾಜಿ, ಸಂಗೀತ ಮತ್ತು ಲಲಿತ ಕಲಾ ವಿಭಾಗದ ಮುಖ್ಯಸ್ಥ ಡಾ.ಶಿವಾನಂದ ಬಂಟನೂರ ಇದ್ದರು.