ದೂರು ಸ್ವೀಕರಿಸದೆ ಸಂತ್ರಸ್ತೆಗೆ ಅನ್ಯಾಯ

12-SEP-GPT-5
Published on

ಗುಂಡ್ಲುಪೇಟೆ: ಅರಣ್ಯಾಧಿಕಾರಿಗಳಿಂದ ತೊಂದರೆ ಎದುರಿಸುತ್ತಿರುವ ಮಹಿಳೆಯೊಬ್ಬರು ನೀಡಿದ ದೂರು ಸ್ವಿಕರಿಸದೆ ಸಂತ್ರಸ್ತರಿಗೆ ಪೊಲೀಸರು ಅನ್ಯಾಯ ಮಾಡುತ್ತಿದ್ದಾರೆ ಎಂದು ಬೊಮ್ಮಲಾಪುರ ಗ್ರಾಮಸ್ಥರು ಹಾಗೂ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಪೊಲೀಸ್ ಠಾಣೆ ಎದುರು ಮುಖಂಡ ಅಭಿಷೇಕ್ ಗುಡಿಮನೆ ಮಾತನಾಡಿ, ಮಂಗಳವಾರ ತಾಲೂಕಿನ ಬೊಮ್ಮಲಾಪುರದಲ್ಲಿ ಅರಣ್ಯ ಸಿಬ್ಬಂದಿ ಮೇಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ರೈತರ ವಿರುದ್ಧ ಪಿತೂರಿ ನಡೆಸಿ ಸಂಜೆ ಐವರ ವಿರುದ್ಧ ದೂರು ನೀಡಿದ ಕೂಡಲೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ, ಘಟನೆಯಲ್ಲಿ ಸಂತ್ರಸ್ತ ಮಹಿಳೆ ತನ್ನ ಮೇಲೆ ಅರಣ್ಯಾಧಿಕಾರಿಗಳು ನಡೆಸಿದ ದೌರ್ಜನ್ಯದ ವಿರುದ್ಧ ಬುಧವಾರವೇ ದೂರು ನೀಡಿದರೂ ಅದನ್ನು ಸ್ವೀಕರಿಸುತ್ತಿಲ್ಲ. ತಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸದ ಅರಣ್ಯ ಇಲಾಖೆ ನೌಕರರು ಹಾಗೂ ಅಧಿಕಾರಿಗಳನ್ನು ರಕ್ಷಿಸಲು ಮುಂದಾಗಿರುವ ಪೊಲೀಸರು ಅಮಾಯಕ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಈ ಬಗ್ಗೆ ನ್ಯಾಯಾಲಯದ ಮೂಲಕ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.

ಹಸಿರು ಸೇನೆ ಹಾಗೂ ರೈತ ಸಂಘದ ಜಿಲ್ಲಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ಮಾತನಾಡಿ, ಅರಣ್ಯ ಇಲಾಖೆ ರೈತ ಹಾಗೂ ಜನವಿರೋಧಿ ನೀತಿ ಅನುಸರಿಸುತ್ತಿದೆ. ಅವರ ಜತೆ ಪೊಲೀಸರು ಕೈಜೋಡಿಸಿದ್ದಾರೆ. ಇದರ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅರಿಶಿಣ ಬೆಳೆಗಾರರ ಒಕ್ಕೂಟದ ಸಂಚಾಲಕ ಎಸ್.ಎಂ.ನಾಗಾರ್ಜುನಕುಮಾರ್ ಮಾತನಾಡಿ, 1997ರ ಸಿಆರ್‌ಪಿಸಿ ಕಾಯ್ದೆಯು ಠಾಣಾಧಿಕಾರಿ ಯಾವುದೇ ಸರ್ಕಾರಿ ಅಧಿಕಾರಿಯಿಂದ ಸಂತ್ರಸ್ತಳಾದ ಮಹಿಳೆ ನೀಡುವ ದೂರು ಸ್ವೀಕರಿಸಬೇಕು ಎಂದು ಸ್ಪಷ್ಟವಾಗಿದೆ. ಪೊಲೀಸರು ಎರಡು ದಿನಗಳ ಕಾಲ ಕಾಯಿಸಿ ಈಗ ದೂರು ತೆಗೆದುಕೊಳ್ಳುವುದಿಲ್ಲ ಎಂದು ನಿರಾಕರಿಸುವ ಮೂಲಕ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಹಿಳಾ ಆಯೋಗವು ಮಧ್ಯಪ್ರವೇಶಿಸಿ ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಸಂಪತ್ತು, ಜಗದೀಶ್, ಮಹದೇವಪ್ಪ, ಶಿವಪ್ರಸಾದ್, ವಿಶ್ವಾಸ್, ನಾಗಪ್ಪ, ರಾಜಪ್ಪ, ಬಸವೇಶ್, ಯೋಗೇಶ್, ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net