ದುಷ್ಟರ ಸಂಹಾರವೇ ರಾಮನವಮಿ ಸಂಕಲ್ಪ

bkt-30-4
Published on

ಬಾಗಲಕೋಟೆ: ಹಿಂದೂ ಸಂಪ್ರದಾಯದಲ್ಲಿ ರಾಮನನ್ನು ವಿಷ್ಣುವಿನ ಅವತಾರವಾಗಿ ಪೂಜಿಸಲಾಗುತ್ತದೆ. ಶ್ರೀರಾಮನ ಕಾಲದಲ್ಲಿ ದುಷ್ಟರ ಸಂಹಾರ ಮಾಡಿ, ಸತ್ಯವಂತರಿಗೆ ಅವಕಾಶವಿತ್ತು. ದುಷ್ಟರು ದೂರಾಗಿ, ಸತ್ಯವಂತರಿಗೆ ಎಲ್ಲ ರೀತಿಯ ವಿಜಯ ಸಿಗಲಿದೆ. ಶ್ರೀರಾಮನ ಧರ್ಮನಿಷ್ಠೆ, ಸತ್ಯನಿಷ್ಠೆಯನ್ನು ನಾವೆಲ್ಲ ಪಾಲನೆ ಮಾಡೋಣ ಎಂದು ಯುವ ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.

ನಗರದ ಕುಮಟಗಿ ಸಂಕೀರಣದಲ್ಲಿ ಕಾಮಧೇನು ಸಂಸ್ಥೆಯಿಂದ ಗುರುವಾರ ಹಮ್ಮಿಕೊಂಡಿದ್ದ ಶ್ರೀರಾಮ ನವಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀರಾಮ ನವಮಿ ಉತ್ಸವ, ದುಷ್ಟರ ಮೇಲೆ ಒಳ್ಳೆಯತನದ ವಿಜಯ ಎಂದು ಬಿಂಬಿಸಲಾಗಿದೆ. ಅಧರ್ಮವನ್ನು ಸೋಲಿಸಿ ಧರ್ಮದ ಸ್ಥಾಪನೆಯನ್ನು ಮಾಡಿದ ಕಾರ್ಯವಾಗಿದೆ. ಶ್ರೀರಾಮನವಮಿ, ಅಸಂಖ್ಯಾತ ಹಿಂದೂಗಳ ದೇವರಾದ ರಾಮನ ಹುಟ್ಟಿದ ದಿನ. ಶ್ರೀರಾಮ ರಾಮಾಯಣದ ಕಥಾ ನಾಯಕ ಹಾಗೂ ಆದಿಕಾಲದ ಭಾರತದ ಅಯೋಧ್ಯೆಯ ರಾಜನೇ ಶ್ರೀರಾಮ. ಅವರ ಹುಟ್ಟಿದ ಸ್ಥಳದಲ್ಲಿ ಹಿಂದೂಗಳ ಆಶಯದಂತೆ ರಾಮ ಮಂದಿರ ನಿರ್ಮಾಣಗೊಳ್ಳುತ್ತಿದೆ. ಇದು ಭಾರತೀಯ ಹಿಂದೂಗಳ ಅತ್ಯಂತ ಶ್ರದ್ಧಾ-ಭಕ್ತಿಯ ಕೇಂದ್ರವಾಗಲಿದೆ ಎಂದರು.

ಕಾಮಧೇನು ಸಂಸ್ಥೆಯ ಸದಸ್ಯ, ಯುವ ಮುಖಂಡ ಸಂತೋಷ ಹೊಕ್ರಾಣಿ ಮಾತನಾಡಿ, ಇಂದು ಹಿಂದೂಗಳಿಗೆ ಅತ್ಯಂತ ಪವಿತ್ರ ದಿನ. ಶ್ರೀರಾಮನ ಹುಟ್ಟಿದ ಈ ದಿನವನ್ನು ನಾವೆಲ್ಲ ಉತ್ಸವವನ್ನಾಗಿ ಆಚರಿಸುತ್ತೇವೆ. ಶ್ರೀರಾಮ ಭಕ್ತರ ಹಲವು ವರ್ಷಗಳ ಆಶಯವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈಡೇರಿಸಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ಕೋಟ್ಯಾಂತರ ಹಿಂದೂಗಳ ನಡೆಸಿದ ಹೋರಾಟ, ಉಪವಾಸ ವೃತ ಎಲ್ಲವೂ ಈಡೇರಿದೆ. ಶ್ರೀರಾಮನ ಭಕ್ತರಾದ ನಾವೆಲ್ಲ ಸಮಾಜಕ್ಕೆ ಒಳಿತಾಗುವ ಕಾರ್ಯ ಮಾಡೋಣ. ಇಂತಹ ಸಮಾಜಮುಖಿ ಕಾರ್ಯಗಳಿಗಾಗಿಯೇ ಬಾಗಲಕೋಟೆಯಲ್ಲಿ ಕಾಮಧೇನು ಸಂಸ್ಥೆ ಹುಟ್ಟು ಹಾಕಲಾಗಿದೆ ಎಂದು ಹೇಳಿದರು.

ಬಸವೇಶ್ವರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ, ಕಾಮಧೇನು ಸಂಸ್ಥೆಯ ಅಧ್ಯಕ್ಷ ರವಿ ಕುಮಟಗಿ, ಪ್ರಮುಖರಾದ ವಿಜಯ ಸುಲಾಖೆ, ಶಿವು ಮೇಲ್ನಾಡ, ಅಶೋಕ ಮುತ್ತಿನಮಠ, ರಾಜು ಗೌಳಿ, ಬಸವರಾಜ ಪಾತ್ರೋಟಿ, ಅರುಣ ಲೊಕಾಪೂರ, ಮುತ್ತು ಸಜ್ಜನ, ಗುರು ಅನಗವಾಡಿ, ಚಂದ್ರಕಾಂತ ಕೇಸನೂರ, ದುಂಡಪ್ಪಾ ಏಳಮ್ಮಿ, ಉಜ್ವಲ ಸಕ್ರಿ, ಮೃತ್ಯುಂಜಯ ಬಳೂಲಮಠ, ನಿಂಗಪ್ಪ ಮೊಕಾಶಿ, ಶಿವಾನಂದ ಹೊಸಮನಿ ಮುಂತಾದವರು ಕಾರ್ಯಕರ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net