ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವ ಸಮುದಾಯ

12blrp2
Published on

ಬೇಲೂರು: ಮೋಜಿಗಾಗಿ ಯುವ ಸಮುದಾಯ ದುಶ್ಚಟಗಳ ದಾಸರಾಗಿ ತಮ್ಮ ಜೀವನವನ್ನು ಬಲಿ ಕೊಡುತ್ತಿದ್ದು, ಅದನ್ನು ತಪ್ಪಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ದೇಶದ ಆಸ್ತಿಯನ್ನಾಗಿಸಬೇಕೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಚಂದ್ರಶೇಖರ್ ಸಲಹೆ ನೀಡಿದರು.
ಪಟ್ಟಣ ಸಮೀಪದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ತಂಬಾಕು ಸೇವನೆ ಮನುಷ್ಯನ ಮೇಲೆ ಮಾಡುವ ದುಷ್ಟರಿಣಾಮಗಳನ್ನು ಯುವ ಸಮುದಾಯಕ್ಕೆ ಮನ ಮುಟ್ಟವಂತೆ ತಿಳಿಸಿ ಅವರನ್ನು ರಕ್ಷಿಸುವುದು ಮುಖ್ಯವಾಗಿದೆ. ತಂಬಾಕು ಸೇವನೆಯ ದುಶ್ಚಟಕ್ಕೆ ದಾಸರಾಗಿ ವಿಶ್ವದಲ್ಲಿ ಪ್ರತಿವರ್ಷ ಲಕ್ಷಾಂತರ ಜನ ಬಲಿಯಾಗುತಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸಬೇಕಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮದ್ಯಪಾನ ವಿರೋಧಿ ಹಾಗೂ ವ್ಯಸನ ಮುಕ್ತ ಮಾಡಲು ಸಾವಿರಾರು ಮದ್ಯವರ್ಜನ ಶಿಬಿರ ನಡೆಸಿ ಜನರನ್ನು ಸರಿದಾರಿಗೆ ತರುತ್ತಿದೆ ಎಂದರು.


ಆರೋಗ್ಯ ಶಿಕ್ಷಣಾಧಿಕಾರಿ ಉಷಾ ಮಾತನಾಡಿ, ಒತ್ತಡ ನಿವಾರಣೆಗೆ ಧೂಮಪಾನ ಸಹಕಾರಿ ಎಂದು ಬಹುತೇಕರು ಅದಕ್ಕೆ ಬಲಿಯಾಗುತಿದ್ದಾರೆ. ತಂಬಾಕಿನಲ್ಲಿರುವ ವಿಷಕಾರಿ ಕ್ಯಾನ್ಸರ್‌ಕಾರಕ ರಾಸಾಯನಿಕಗಳು ಶ್ವಾಸಕೋಶ, ಅನ್ನನಾಳ, ನಾಲಿಗೆ, ಗಂಟಲು ಸೇರಿದಂತೆ ಇತರೆಡೆಗೂ ಮಾರಣಾಂತಿಕ ರೋಗಗಳನ್ನು ಹರಡಿ ಮನುಷ್ಯನನ್ನು ಬಲಿ ಪಡೆಯುತ್ತದೆ ಎಂದರು.


ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪುಟ್ಟರಾಜು ಮಾತನಾಡಿ, ಪ್ರತಿವರ್ಷ ನಡೆಯುವ ವಿಶ್ವತಂಬಾಕು ರಹಿತ ದಿನದಲ್ಲಿ ಥೀಮ್‌ನೊಂದಿಗೆ ಆಚರಣೆ ನಡೆಸುತ್ತಾರೆ. ಸದ್ಯ ಪ್ರಸಕ್ತ ವರ್ಷ ‘ನಮಗೆ ಆಹಾರ ಬೇಕು-ತಂಬಾಕು ಬೇಡ’ ಎಂಬ 2023ರ ಥೀಮ್‌ನಡಿ ಜಾಗತಿಕ ಅಭಿಯಾನಕ್ಕೆ ಮುಂದಾಗಿದ್ದೇವೆ. ತಂಬಾಕು ಯಾವುದೇ ವ್ಯಸನಕ್ಕಿಂತ ಹೆಚ್ಚಿನ ಜನರನ್ನು ಕೊಲ್ಲುತ್ತದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ತಂಬಾಕಿನಿಂದ ದೂರವಿರುವಂತೆ ಮಾಡಬೇಕಿದೆ ಎಂದರು.


ಜಿಲ್ಲಾ ತಂಬಾಕು ನಿಯಂತ್ರಣ ಸಮನ್ವಯಾಧಿಕಾರಿ ವಿಮಲಾ, ವೈಡಿಡಿ ಕಾರ್ಯಕ್ರಮಾಧಿಕಾರಿ ಎಚ್.ಆರ್.ಮೋಹನ್‌ಕುಮಾರ್, ಮೇಲ್ವಿಚಾರಕಿ ಭಾರತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net