

ಕಲಬುರಗಿ: ಇಳಕಲ್‌ನ ಪೂಜ್ಯ ಡಾ.ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವ್ಯಸನ ಮುಕ್ತ ದಿನಾಚರಣೆ ನಡೆಯಿತು.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮಾತನಾಡಿ, ಸಮಾಜವನ್ನು ಎಲ್ಲ ಹಂತಗಳಲ್ಲಿ ಸದೃಢಗೊಳಿಸಲು ವ್ಯಸನ ಮುಕ್ತಗೊಳ್ಳುವುದು ಮುಖ್ಯವಾಗಿದೆ. ಅದಕ್ಕಾಗಿಯೇ ಪೂಜ್ಯರು ಜೋಳಿಗೆ ಹಾಕಿಕೊಂಡು ಊರೂರು ಸುತ್ತಾಡಿ ನಿಮ್ಮ ದುಶ್ಚಟಗಳನ್ನು ನನ್ನ ಜೋಳಿಗೆ ಹಾಕಿ ಎಂದು ಹೇಳಿ ಜನರಿಗೆ ವ್ಯಸನಮುಕ್ತರಾಗಿಸುವ ನಿಟ್ಟಿನಲ್ಲಿ ಮಾಡಿರುವ ಕಾಯಕ ಅಮೋಘವಾಗಿದೆ ಎಂದು ಸ್ಮರಿಸಿದರು.
ಪೂಜ್ಯರ ಹಾದಿಯಲ್ಲಿ ಎಲ್ಲರೂ ನಡೆಯುವ ಮೂಲಕ ಮಾದರಿ ಸಮಾಜ ನಿರ್ಮಿಸಲು ಕೈಜೋಡಿಸಬೇಕು. ದುಶ್ಚಟಗಳಿಂದ ಎಲ್ಲರೂ ದೂರವಿರುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಆಹಾರ ಇಲಾಖೆ ಉಪ ನಿರ್ದೇಶಕ ಶಾಂತಗೌಡ ಗುಣಕಿ, ಜಿಲ್ಲಾಧಿಕಾರಿ ಕಚೇರಿ ಪ್ರೊಬೇಷನರಿ ತಹಸೀಲ್ದಾರ್ ವಾಸುದೇವ ಸ್ವಾಮಿ, ಭೂದಾಖಲೆ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ ಜಾಧವ್ ಇತರರಿದ್ದರು. ಶಾಂತಗೌಡ ಗುಣಕಿ ಅವರು ವ್ಯಸನಮುಕ್ತಗೊಳಿಸಲು ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಿದರು.