

ವಿರಾಜಪೇಟೆ: ವಿರಾಜಪೇಟೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮೂರ್ನಾಡು ವಲಯದ ಮರಗೊಡು ಕಾರ್ಯಕ್ಷೇತ್ರದ ಅರೆಕಾಡು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ನಿವೃತ್ತ ಶಿಕ್ಷಕಿ ಲತಾ ಮಾತನಾಡಿ, ಹದಿಹರೆಯದ ಮಕ್ಕಳು ದುಶ್ಚಟಕ್ಕೆ ಬಲಿಯಾಗುತ್ತಿದ್ದು, ಮಾದಕ ವಸ್ತುಗಳ ಸೇವನೆಯಿಂದ ಕಾಯಿಲೆಗೆ ಒಳಗಾಗಿ, ಓದಿನ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳಾದ ಗುಟ್ಕಾ, ಮದ್ಯ, ಅಮಲು ಪದಾರ್ಥಗಳ ಸೇವನೆಯಿಂದ ಆರೋಗ್ಯಕ್ಕೆ ಮಾತ್ರ ಹಾನಿಕಾರವಲ್ಲದೆ ನಮ್ಮ ಪರಿವಾರಕ್ಕೂ ಹಾನಿಯನ್ನುಂಟು ಮಾಡುತ್ತವೆ. ಈ ರೀತಿಯ ಮಾದಕ ವಸ್ತುಗಳ ಸೇವನೆಯಿಂದ ಕ್ಯಾನ್ಸರ್ ಕಾಯಿಲೆಗಳು ಬರಬಹುದು. ಒಂದು ವೇಳೆ ಯಾರಾದರೂ ವ್ಯಸನಕ್ಕೆ ಒಳಗಾದಲ್ಲಿ ಅಥವಾ ಈ ರೀತಿಯ ಅಮಲು ಪದಾರ್ಥಗಳ ಸೇವಿಸುವುದು ಕಂಡಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ತಿಳಿಸಿದರು.
ಗಣ್ಯರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪದ್ಮಾವತಿ ಮಾತನಾಡಿ, ಯೋಜನೆ ಕಾರ್ಯಕ್ರಮಗಳು ಹಾಗೂ ಜನ ಮಂಗಳ ಕಾರ್ಯಕ್ರಮಗಳ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮೇಲ್ವಿಚಾರಕರಾದ ಪ್ರತಾಪ್ ದೇವಾಡಿಗ, ಸೇವಾ ಪ್ರತಿನಿಧಿ ಬಿ.ಎಸ್.ಲತಾ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.