

ಕಿಕ್ಕೇರಿ: ಸಮಾನತೆಯ ವಿಶಾಲ ಕರ್ನಾಟಕವನ್ನು ಕಟ್ಟಲು ಶ್ರಮಿಸಿದ ಮಹಾನ್ ಹರಿಕಾರ ಡಿ.ದೇವರಾಜ ಅರಸು ಎಂದು ಸ್ಪಂದನಾ ಫೌಂಡೇಷನ್ ಟ್ರಸ್ಟಿ ತ್ರಿವೇಣಿ ಬಣ್ಣಿಸಿದರು.
ಪಟ್ಟಣದಲ್ಲಿ ಸ್ಪಂದನ ಫೌಂಡೇಷನ್, ಕನ್ನಡ ಕಲಾ ಸಂಘ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಡಿ.ದೇವರಾಜು ಅರಸು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯಾಗಿ ದೀನ-ದಲಿತ, ದುರ್ಬಲರಿಗೆ ನೆರವಾದರು. ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ನಾಮಾಂಕಿತ ಮಾಡಿದರು. ರಾಜ್ಯದ ಜನತೆಗೆ ಅನುಕೂಲವಾಗುವ ದಿಸೆಯಲ್ಲಿ 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತಂದರು. ರಾಜಕೀಯ, ಶೈಕ್ಷಣಿಕವಾಗಿ ಸಮಾನತೆ ತರಲು ಪರಿಶ್ರಮಿಸಿದರು. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ರಾಜಕೀಯವಾಗಿ ಜೀವ ನೀಡಿದರು. ಇವರ ನೇರ ನುಡಿ ಪ್ರಸ್ತುತ ರಾಜಕಾರಣಿಗಳಿಗೆ ಅವಶ್ಯವಾಗಿದೆ ಎಂದರು.
ಶಾಲಾ ಮಕ್ಕಳು ಹಳ್ಳಿಗಾಡಿನಿಂದ ಶಾಲಾ, ಕಾಲೇಜಿಗೆ ತೆರಳಲು ಕಷ್ಟವಾಗಿತ್ತು. ಈ ಸಮಸ್ಯೆಯನ್ನು ಕಣ್ಣಾರೆ ಕಂಡ ಅರಸರು ಶಾಲಾ ಮಕ್ಕಳಿಗೆ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬೆಳಕಾದರು. ಇವರ ಸರಳ, ನೇರ ನುಡಿಯನ್ನು ವಿದ್ಯಾರ್ಥಿಗಳು ಬದುಕಿನಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಕವಿತಾ, ಸವಿತಾ ಮತ್ತಿತರರಿದ್ದರು.