ದುಬೈನಿಂದ 178 ಜನರ ಆಗಮನ

8bkl2 (2)
Published on

ಭಟ್ಕಳ: ಕರೊನಾ ಲಾಕ್​ಡೌನ್​ನಿಂದಾಗಿ ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಟ್ಕಳ ಸೇರಿ ಸುತ್ತಲಿನ ಒಟ್ಟು 178 ಕರಾವಳಿಯ ನಿವಾಸಿಗಳು 2ನೇ ವಿಶೇಷ ವಿಮಾನದ ಮೂಲಕ ಬುಧವಾರ ನಸುಕಿನ ಜಾವ 1 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣ ತಲುಪಿದ್ದಾರೆ.

ಜಿಲ್ಲಾಡಳಿತದ ನಿರ್ದೇಶನ ಮತ್ತು ತಂಝೀಮ್ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ 103 ಪುರುಷರನ್ನು ಜಾಮಿಯಾಬಾದ್ ರಸ್ತೆಯಲ್ಲಿರುವ ಅಲಿ ಪಬ್ಲಿಕ್ ಶಾಲೆಯಲ್ಲಿ ಹಾಗೂ ಉಳಿದ 75 ಜನರನ್ನು ಖಾಸಗಿ ಹೋಟೆಲ್​ಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ದುಬೈನ ಉದ್ಯಮಿ ಅತೀಕ್-ಉರ್-ರೆಹಮಾನ್ ಮುನಿರಿ ಅವರು ಈಗ ಎರಡನೇ ಬಾರಿ ಚಾರ್ಟರ್ಡ್ ವಿಮಾನದ ಮೂಲಕ ಆರು ಮಕ್ಕಳು ಸೇರಿ 178 ಜನರನ್ನು ಭಟ್ಕಳಕ್ಕೆ ಕಳುಹಿಸಿದ್ದಾರೆ.ಕಳೆದ ಜೂ. 12 ರಂದು ದುಬೈ ಮತ್ತು ಯುಎಇಯಲ್ಲಿ ಭಟ್ಕಳ ಮತ್ತು ಸುತ್ತಮುತ್ತಲಿನ ಜನರನ್ನು ಮೊದಲ ವಿಮಾನದಲ್ಲಿ ಕಳುಹಿಸಿದ್ದರು.

ಸೋಂಕಿತರಿಗೆ ಆಸ್ಪತ್ರೆಯಲ್ಲಿ ಊಟ-ತಿಂಡಿ ಸಮಸ್ಯೆ
ಭಟ್ಕಳ:
ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಕ್ವಾರಂಟೈನ್ ಆಗುತ್ತಿದ್ದಂತೆ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗುತ್ತಿದೆ. ಕೋವಿಡ್ ಪ್ರಕರಣದಲ್ಲಿ ದಾಖಲಾಗಿದ್ದ ಸೋಂಕಿತರು, ಪೌರ ಸಿಬ್ಬಂದಿ ಆಹಾರದ ಇಲ್ಲದೆ ಪರದಾಡುವ ಸ್ಥಿತಿ ನಿರ್ವಣವಾಗಿದೆ.

ಭಟ್ಕಳದಲ್ಲಿ ಸೀಲ್​ಡೌನ್, ಲಾಕ್​ಡೌನ್ ಇದ್ದಾಗಲೂ ಆಡಳಿತ ವೈದ್ಯಾಧಿಕಾರಿ ಹಲವು ಬಾರಿ ಸ್ವಂತ ಖರ್ಚಿನಲ್ಲಿ ಸೋಂಕಿತರಿಗೆ ಆಹಾರ ಸರಬರಾಜು ಮಾಡಿ, ಸೋಂಕಿತರಿಂದ ದೂರು ಬರದಂತೆ ನೋಡಿಕೊಂಡಿದ್ದರು. ಆದರೆ, ಕಳೆದ 2 ದಿನಗಳ ಹಿಂದೆ ಆಸ್ಪತ್ರೆಯ ವೈದ್ಯಾಧಿಕಾರಿ ಕ್ವಾರಂಟೈನ್​ಗೆ ತೆರಳಿದ್ದಾರೆ. ಅಂದಿನಿಂದ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಆರಂಭವಾಗಿದೆ ಎಂದು ಜನರು ದೂರುತ್ತಿದ್ದಾರೆ. ತಾಲೂಕಿನ ಗ್ರಾಮೀಣ ಭಾಗದ ಯುವಕನೊಬ್ಬ ಕರೊನಾ ಸೋಂಕಿಗೊಳಗಾಗಿ ಭಟ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಊಟಕ್ಕಾಗಿ ಕಾದು ಸುಸ್ತಾಗಿ ಕಡೆಗೆ ಹಳ್ಳಿಯ ತನ್ನ ಮನೆಯಿಂದ ಊಟ ತರಿಸಿದ್ದಾರೆ.

ಇನ್ನು ಪಟ್ಟಣದ ಯುವತಿಯೊಬ್ಬರು ಆಸ್ಪತ್ರೆಯ ಸಂಬಂಧಪಟ್ಟವರಿಗೆ ಕರೆ ಮಾಡಿದರೂ ಆಹಾರ ಸರಬರಾಜು ಆಗಿಲ್ಲ. ನಂತರ ಅವರು ಭಟ್ಕಳ ಉಪವಿಭಾಗಾಧಿಕಾರಿ ಭರತ ಎಸ್. ಅವರಿಗೆ ಕರೆ ಮಾಡಿ ಆಹಾರ ತರಿಸಿಕೊಂಡಿದ್ದಾರೆ. ಮಂಗಳವಾರ ಬೆಳಗಿನವರೆಗೂ ಅಲ್ಲಿ 25 ಸೋಂಕಿತರು ಇದ್ದು, ಎಲ್ಲರೂ ಇದೇ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಭಟ್ಕಳದ ಒಂದು ಸಂಘಟನೆ ತಮ್ಮವರಿಗೆ ಆಹಾರದ ವ್ಯವಸ್ಥೆ ಮಾಡಿದೆ.ಆಸ್ಪತ್ರೆಯ ಈ ಅವ್ಯವಸ್ಥೆಯ ವಿರುದ್ಧ ಸಾರ್ವಜನಿಕರು, ಸೋಂಕಿತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಹಾರವನ್ನು ಸಮಯಕ್ಕೆ ಸರಿಯಾಗಿ ನೀಡಿ ಎಂದು ಭಟ್ಕಳಕ್ಕೆ ಆಗಮಿಸಿದ ಡಿಎಚ್​ಒ ಶರದ ನಾಯಕ ಅವರನ್ನು ಆಗ್ರಹಿಸಿದ್ದಾರೆ.

ಭಟ್ಕಳ ಸರ್ಕಾರಿ ಆಸ್ಪತ್ರೆಯ ಸ್ಥಿತಿಗತಿ ಕುರಿತು ಅಲ್ಲಿನ ಸ್ಥಿತಿ ತನ್ನ ಗಮನಕ್ಕೆ ಬಂದಿದೆ. ನನ್ನ ಪರಿದಿಗೆ ಒಳಪಡುವ ಭಟ್ಕಳ ಮತ್ತು ಹೊನ್ನಾವರ ಆಸ್ಪತ್ರೆಗೆ ಒಂದು ಹೊಸ ನಿಯಮ ರೂಪಿಸಲಾಗುವುದು. ಯಾವುದೇ ಸೋಂಕಿತರಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. | ಭರತ ಎಸ್ ಉಪವಿಭಾಗಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net