ದುಬಾರಿ ಬೆಲೆಗೆ ಚಿಕನ್-ಮಟನ್ ಮಾರಾಟ

12KMT3
Published on

ಕುಮಟಾ: ಅಧಿಕಾರಿಗಳ ಕಣ್ಣು ತಪ್ಪಿಸಿ ಅಂಗಡಿ ಹಿಂಬಾಗಿಲಲ್ಲಿ ದುಬಾರಿ ಬೆಲೆಗೆ ಚಿಕನ್-ಮಟನ್ ಮಾರುತ್ತಿದ್ದಾರೆಂಬ ದೂರಿನ ಮೇರೆಗೆ ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ.ಕೆ. ಪಟ್ಟಣದ ಕೆಲ ಮಾಂಸದ ಅಂಗಡಿಗಳನ್ನು ಭಾನುವಾರ ಪರಿಶೀಲಿಸಿ ಅಂಗಡಿಕಾರರಿಗೆ ಎಚ್ಚರಿಕೆ ನೀಡಿದರು.

ಹಳೇಮೀನುಪೇಟೆ ಹಾಗೂ ಇತರ ಕೆಲ ಕಡೆಗಳಲ್ಲಿ ಲಾಕ್​ಡೌನ್ ನಿಯಮ ಉಲ್ಲಂಘಿಸಿ ಅಂಗಡಿಯ ಹಿಂಬಾಗಿಲಲ್ಲಿ ಹಾಗೂ ಕಳ್ಳಮಾರ್ಗದಲ್ಲಿ ಜನರಿಗೆ ಸಹಜ ಬೆಲೆಯ ಮೂರ್ನಾಲ್ಕು ಪಟ್ಟು ಹೆಚ್ಚಿನ ಬೆಲೆಗೆ ಚಿಕನ್-ಮಟನ್ ಮಾರುತ್ತಿದ್ದ ಬಗ್ಗೆ ಕೆಲ ನಾಗರಿಕರು ಪುರಸಭೆಗೆ ದೂರಿದ್ದರು. ಚಿಕನ್ ಕೆಜಿಗೆ 300 ರೂ. ಮಾರುತ್ತಿದ್ದರು ಎಂದು ದೂರಲಾಗಿತ್ತು.

ಕೂಡಲೇ ಸಿಬ್ಬಂದಿಯೊಂದಿಗೆ ಮುಖ್ಯಾಧಿಕಾರಿ ಸುರೇಶ ಮಾಂಸದ ಅಂಗಡಿಗಳನ್ನು ಪರಿಶೀಲಿಸಿದಾಗ ಅಂಗಡಿಗಳು ಬಾಗಿಲು ಹಾಕಿತ್ತು. ಆದರೆ, ಮಾಂಸ ಕೊಳ್ಳಲು ಕೆಲವರು ಅಂಗಡಿ ಬಳಿ ನಿಂತಿದ್ದರು. ಇದರಿಂದ ಮೇಲ್ನೋಟಕ್ಕೆ ನಿಯಮಬಾಹಿರವಾಗಿ ಮಾಂಸ ಮಾರುತ್ತಿದ್ದುದು ಕಂಡುಬಂದಿದೆ.

ಈ ಕುರಿತು ಮುಖ್ಯಾಧಿಕಾರಿ ಸುದ್ದಿಗಾರರಿಗೆ ಮಾಹಿತಿ ನೀಡಿ, ಲಾಕ್​ಡೌನ್ ಪ್ರಕಾರ ಏ. 14 ರವರೆಗೆ ಮಾಂಸ ಮಾರಾಟ ಮಾಡದಂತೆ ಪಟ್ಟಣದ ಮಾಂಸದ ಅಂಗಡಿಗಳಿಗೆ ತಿಳಿಸಿದ್ದರೂ ಕೆಲವೆಡೆ ದುಬಾರಿ ಬೆಲೆಗೆ ಹಿಂಬಾಗಿಲ ಮಾರಾಟ ನಡೆಸಿರುವ ಅನುಮಾನವಿದೆ. ಸರ್ಕಾರದ ನಿರ್ದೇಶನ ಬರುವರೆಗೂ ನಿಯಮಬಾಹಿರವಾಗಿ ಮಾಂಸ ಮಾರಿದರೆ ಅಂಗಡಿ ಸೀಜ್ ಮಾಡುವ ಎಚ್ಚರಿಕೆ ನೀಡಿದ್ದೇನೆ ಎಂದರು.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net