

ಹುಣಸೂರು: ಬಿ ಖಾತಾ ಆಂದೋಲನದಡಿ 6 ವರ್ಷಗಳ ದುಪ್ಪಟ್ಟು ಕಂದಾಯ ವಸೂಲಾತಿ ಇನ್ನೆರಡು ದಿನಗಳಲ್ಲಿ ರದ್ದುಗೊಳ್ಳಲಿದೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ತಿಳಿಸಿದರು.
ಈ ಕುರಿತು ಸೋಮವಾರ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಅವರೊಂದಿಗೆ ಸಭೆ ನಡೆಸಿದ ನಂತರ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ಬಿ ಖಾತಾ ಆಂದೋಲನ ಅರಂಭವಾದ ನಂತರ ಮೈಸೂರು ಜಿಲ್ಲೆಯಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ ಕಳೆದ 6 ವರ್ಷಗಳ ದುಪ್ಪಟ್ಟು ಕಂದಾಯ ವಸೂಲಾತಿಗೆ ಜಿಲ್ಲಾಧಿಕಾರಿಗಳು ಮೌಖಿಕ ಆದೇಶ ಹೊರಡಿಸಿದ್ದರು. ಈ ಕುರಿತು ಹುಣಸೂರು ನಗರದ ನಾಗರಿಕರು ಮತ್ತು ಜನಪ್ರತಿನಿಧಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನನ್ನ ಬಳಿ ಈ ಬಗ್ಗೆ ದೂರುಗಳು ಬಂದಿದ್ದವು. ಸಮಸ್ಯೆ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸುವುದಾಗಿ ತಿಳಿಸಿದ್ದೆ. ಅದರಂತೆ ಸೋಮವಾರ ಜಿಲ್ಲಾಧಿಕಾರಿಗಳು ಸಮಯ ನಿಗದಿಮಾಡಿದ್ದರಿಂದ ಹುಣಸೂರು ನಗರಸಭೆಯ ಕೌನ್ಸಿಲರ್‌ಗಳು ಮತ್ತು ನಾಗರಿಕರೊಂದಿಗೆ ಭೇಟಿ ಮಾಡಿ ಸಮಸ್ಯೆಯ ಗಂಭೀರತೆಯನ್ನು ತಿಳಿಸಲಾಯಿತು ಎಂದರು.
ಸಮಸ್ಯೆ ಕುರಿತು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್‌ರೆಡ್ಡಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪ್ರಸ್ತುತ ವರ್ಷದ ಕಂದಾಯವನ್ನು ಮಾತ್ರ ದುಪ್ಪಟ್ಟು ಪ್ರಮಾಣದಲ್ಲಿ ವಸೂಲಾತಿ ಮಾಡಲು ಮತ್ತು 6 ವರ್ಷಗಳ ದುಪ್ಪಟ್ಟು ಕಂದಾಯವನ್ನು ರದ್ದುಗೊಳಿಸಲು ಕ್ರಮವಹಿಸಿ 2-3 ದಿನಗಳಲ್ಲಿ ಉಪಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್‌ಕುಮಾರ್, ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸದಸ್ಯರಾದ ಗಣೇಶ್ ಕುಮಾರಸ್ವಾಮಿ, ಸತೀಶ್ ಕುಮಾರ್, ಮಾಲಿಕ್ ಪಾಷಾ, ರಾಣಿ ಪೆರುಮಾಳ್, ಶ್ರೀನಾಥ್, ದೇವನಾಯ್ಕ, ಮುಖಂಡ ನಿಂಗರಾಜು ಹಾಜರಿದ್ದರು.