

ಚಿಂತಾಮಣಿ: ವಕ್ಫ್ ಆಸ್ತಿ ವಿವಾದ ಮತ್ತೆ ಭುಗಿಲೇಳುತ್ತಿದ್ದು, ನಗರದ 31ನೇ ವಾರ್ಡ್‌ನ ತಿಮ್ಮಸಂದ್ರ ಗ್ರಾಮದ ವಿವಾದಿತ ಜಾಗಕ್ಕೆ ಮಾಜಿ ಸಂಸದ ಮುನಿಸ್ವಾಮಿ, ಮೇಲ್ಮನೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಮಾಜಿ ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ವಿವಾದಿತ ಜಾಗಕ್ಕೆ ಪ್ರವೇಶಿಸದಾಗ ಪೊಲೀಸರು ಅವರನ್ನು ಹೊರಕಳಿಸಿದರು. ಅದೇ ವೇಳೆ ವಿವಾದಿತ ಸ್ಥಳದಲ್ಲಿ ಹಸುಗಳನ್ನು ಕಟ್ಟಿದ್ದನ್ನು ಕಂಡು ಮೂವರು ಪೊಲೀಸರ ವಿರುದ್ಧ ತಿರುಗಿಬಿದ್ದರು.
ಮಾಜಿ ಸಂಸದ ಮುನಿಸ್ವಾಮಿ ಮಾತನಾಡಿ, ಇಲ್ಲಿನ ಮಂತ್ರಿಗಳು ಇಷ್ಟವಿದ್ದರೆ ಮಸೀದಿಗೆ ಹೋಗಲಿ ಎಂದು ಗರಂ ಆದರು. ಅವರಿಗೆ ಜಮೀರ್ ಇದ್ದರೆ, ರೈತರಿಗೆ ನಾವಿದ್ದೇವೆ. ಇದು ಖರೀದಿ ಮಾಡಿರುವ ಜಮೀನು, ಇಲ್ಲಿಂದ ಯಾಕೆ ಹೋಗಬೇಕು. ರೈತರ ಮೇಲೆ ದಬ್ಬಾಳಿಕೆ ಸರಿಯಲ್ಲ. ನ್ಯಾಯಾಲಯದಲ್ಲಿ ಏನಾಗುತ್ತದೆಯೋ ಆಗಲಿ ಎಂದರು.
ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ನೀರಿನ ಮೇಲಿನ ಗುಳ್ಳೆ ಇದ್ದಂತೆ. ಯಾವಾಗ ಬೇಕಾದರೂ ಪತನಗೊಳ್ಳಬಹುದು. ಇಲ್ಲಿನ ಜಮೀನಿನ ವಿವಾದದ ಬಗ್ಗೆ ಚರ್ಚೆ ನಡೆಸಿ, ಕೇಂದ್ರ ಸರ್ಕಾರದ ಗಮನಕ್ಕೆ ತಂದು ಖರೀದಿ ಮಾಡಿರುವ ಜಮೀನನ್ನು ರೈತರಿಗೆ ವಾಪಸ್ ಕೊಡಿಸಿಕೊಡುವುದಾಗಿ ಹೇಳಿದರು.
ರಾಜ್ಯ ಸರ್ಕಾರದ ಕ್ರಮವನ್ನು ಸಚಿವರು ಸಮರ್ಥನೆ ಮಾಡಿಕೊಳ್ಳಲಿ, ಕಾನೂನು ಪ್ರಕಾರ ನಾವು ಹೋರಾಟ ಮಾಡುತ್ತೇವೆ. ಬೋರ್ಡ್ ಹಾಕಿದರೆ ದುಂಡಾವರ್ತನೆ ಆಗುತ್ತದೆ. ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.
ಬಿಜೆಪಿ ಮುಖಂಡ ದೇವನಹಳ್ಳಿ ಗೋಪಿ ಮಾತನಾಡಿದರು. ಮುಖಂಡರಾದ ಮಹೇಶ್ ಬೈ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜಣ್ಣ, ರಾಜಶೇಖರರೆಡ್ಡಿ, ಮನೋಹರರೆಡ್ಡಿ, ಶಿವಾರೆಡ್ಡಿ, ಗಾಜುಲು ಶಿವಾ, ಸುರೇಶ್ ಮುಂತಾದವರು ಇದ್ದರು.