

ಬಾಗಲಕೋಟೆ: ವರ್ಷದ ದೊಡ್ಡ ಹಬ್ಬವೆಂದೆ ಬಿಂಬಿತವಾಗಿರುವ ಬೆಳಕಿನ ಹಬ್ಬ ದೀಪಾವಳಿ ಜಿಲ್ಲೆಯಾದ್ಯಂತ ಸಂಭ್ರಮ, ಸಂಡಗರದಿಂದ ನಡೆಯಿತು. ಮನೆ-ಮನಗಳಲ್ಲಿ ಸಂಭ್ರಮ, ಸಂತಸ ಮನೆ ಮಾಡಿತ್ತು. ದೀಪಾವಳಿ ಹಬ್ಬದ ಸಡಗರದಲ್ಲಿ ಕೋಟೆನಾಡು ಮಿಂದೆದ್ದಿತು...!!
ಜಿಲ್ಲೆಯ ಎಲ್ಲ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಹಬ್ಬದ ಆಚರಣೆ ಜೋರಾಗಿ ನಡೆಯಿತು. ಗುರುವಾರ ನರಕ ಚತುದರ್ಶಿ, ಶುಕ್ರವಾರ ಅಮವಾಸೆ ಆಚರಿಸಲಾಯಿತು. ಸಂಜೆ ಅಂಗಡಿ, ಮುಂಗಟ್ಟು ಹಾಗೂ ಮನೆಮನಗಳಲ್ಲಿ ಲಕ್ಷ್ಮೀ ಪೂಜೆ ನೆರವೇರಿಸಲಾಯಿತು. ಶನಿವಾರ ಪಾಡ್ಯ ಆಚರಿಸಿ ಮೂರು ದಿನಗಳ ಕಾಲ ಪರಸ್ಪರ ಶುಭಾಶಯಗಳ ವಿನಿಮಯ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿತು.
ಕಬ್ಬು, ಬಾಳೆ ದಿಂಡು, ಚಂಡು ಹೂ, ಬೂದ ಕುಂಬಳಕಾಯಿ ಖರೀದಿಗೆ ಜನರು ಮುಗಿಬಿದ್ದಿದ್ದರು. ಮಾರುಕಟ್ಟೆ ಪ್ರದೇಶದಲ್ಲಿ ಜನ ಜಂಗುಳಿಯಿಂದ ತುಂಬಿದ್ದವು. ಮನೆಗಿಂತಲೂ ಅಂಗಡಿ, ಮುಂಗುಟ್ಟು ಗಳಲ್ಲಿ ಲಕ್ಷ್ಮೀ ಪೂಜೆಯ ವೈಭವದಿಂದ ಜರುಗಿತು. ದೇವಿಗೆ ವಿಶೇಷ ಅಡುಗೆ ಮಾಡಿ ನೈವೇದ್ಯ ಸಮರ್ಪಿಸಲಾಯಿತು. ವಿವಿಧ ಖಾದ್ಯಗಳನ್ನು ತಯಾರಿಸಿ ಆತ್ಮೀಯರಿಗೆ, ಸ್ನೇಹಿತರಿಗೆ, ಬಂದು ಬಳಗಕ್ಕೆ ಉಣಬಡಿಸಿದರು. ಹಬ್ಬಕ್ಕೆಂದೆ ಖರೀದಿಸಿದ್ದ ಹೊಸ ಬಟ್ಟೆ ಆಭರಣ ತೊಟ್ಟು ಸಂತಸ ಪಟ್ಟರು.
ದೊಡ್ಡ ಹಬ್ಬವಾದ ದೀಪಾವಳಿ ಅಂಗವಾಗಿ ಹೊಸ ವಾಹನಗಳು ರಸ್ತೆಗೆ ಇಳಿದವು, ಟಿವಿ, ಫ್ರಿಜ್, ಡೈನಿಂಗ ಟೇಬಲ್ ಸೇರಿದಂತೆ ಮತ್ತಿತರು ಗೃಹ ಉಪಯೋಗಿ ವಸ್ತುಗಳನ್ನು ಖರೀದಿಸಿ ಮನೆಗೆ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಮಾರುಕಟ್ಟೆಯ ಎಲ್ಲ ಅಂಗಡಿ, ಮುಂಗಟ್ಟುಗಳು ಜನರಿಂದ ತುಂಬಿ ತುಳುಕಿದವು. ವಿವಿಧ ನಮೂನೆಗಳ ಆಕಾಶ ಪುಟ್ಟಿಗಳು ಆಕರ್ಷಿಸಿದವು.
ಎಲ್ಲೆಡೆ ಪಟಾಕಿ, ಸಿಡಿಮದ್ದುಗಳ ಕಲರವ
ಜನರು ಹಳೇ ವಾಹನಗಳನ್ನು ಶುಚಿಗೊಳಿಸಿ, ವಿವಿಧ ರೀತಿಯಲ್ಲಿ ಅಲಂಕರಿಸಿ ಪೂಜೆ ಮಾಡುತ್ತಿದ್ದರು. ಅಂಗಡಿ, ಮುಂಗಟ್ಟುಗಳಿಗೆ ಮಾಡಿದ್ದ ವಿದ್ಯುತ್ ಅಲಂಕಾರ ಗಮನ ಸೆಳೆಯಿತು. ಬಗೆ ಬಗೆ ಹೂಗಳಿಂದ ಕಂಗೂಳಿಸಿದವು. ಹೂವು, ಹಣ್ಣು, ಕಾಯಿಗಳ ಖರೀದಿ ಜೋರಾಗಿ ನಡೆಯಿತು. ಸಾರ್ವಜನಿಕರಲ್ಲಿ ಸಂತಸ ಮನೆ ಮಾಡಿತ್ತು. ವ್ಯಾಪಾರ -ವಹಿವಾಟು ಜೋರಾಗಿದ್ದರಿಂದ ಪಟಾಕಿ, ಸಿಡಿಮದ್ದುಗಳ ಕಲರವ ಜೋರಾಗಿದ್ದವು. ಆಗಸದಲ್ಲಿ ಚಿತ್ತಾರ ಮೂಡಿಸುವ ಬಾಣ, ಬಿರುಸುಗಳು ಕಂಡು ಬಂದವು.
ವಾಡಿಕೆಯ ಸಡಗರ:
ವಾಡಿಕೆಯಂತೆ ಹಬ್ಬದ ನಿಮಿತ್ತ ಹೆಣ್ಣು ಮಕ್ಕಳು ತವರು ಆಗಮಿಸಿ ಸಂಭ್ರಮಿಸಿದರು. ತವರು ಮನೆಯಿಂದ ಹೆಣ್ಣು ಮಕ್ಕಳಿಗೆ ಅರಿಶಿಣ, ಕುಂಕುಮ ಮತ್ತು ಕೈ ಬಳೆ ತೋಡಿಸುವದರು ಜತೆಗೆ ಉಡಿ ತುಂಬಲಾಯಿತು. ಇನ್ನೂ ನವ ವಿವಾಹಿತ ಪುರುಷರು ಬೀಗರ ಮನೆಗೆ ಹೋಗಿ-ಬರುವುದು ಅನೇಕರ ಮನೆಗಳಲ್ಲಿ ದೀಪಾವಳಿ ಹಬ್ಬದ ಮೆರಗನ್ನು ಮತ್ತಷ್ಟು ಹೆಚ್ಚಿಸಿತ್ತು.