ದಿಗಂಬರೇಶ್ವರ ೮೦ನೇ ಜಾತ್ರಾ ಮಹೋತ್ಸವ

bkt-14-5
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ದಿಗಂಬರೇಶ್ವರ ಮಠದ ಷಡಕ್ಷರಿ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಕಾಶ ನಾಯ್ಕರ, ಹುಲಗಪ್ಪ ಬಂಡಿವಡ್ಡರ, ರಾವಣ್ಣ ಗಾಣಿಗೇರ ಇದ್ದರು.
Published on

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಸದ್ಗುರು ದಿಗಂಬರೇಶ್ವರ ೮೦ನೇ ಜಾತ್ರಾ ಮಹೋತ್ಸವ ಅಂಗವಾಗಿ ಫೆ.೧೬ ರಿಂದ ೨೪ ರವರೆಗೆ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದು ದಿಗಂಬರೇಶ್ವರ ಮಠದ ಷಡಕ್ಷರಿ ಸ್ವಾಮೀಜಿ ಹೇಳಿದರು.

ಫೆ.೨೦ ಕ್ಕೆ ಸಂಜೆ ೫.೩೦ಕ್ಕೆ ದಿಗಂಬರೇಶ್ವರ ಮಹಾರಥೋತ್ಸವ ಜರುಗಲಿದೆ. ಫೆ.೧೬ ರಿಂದ ೧೯ರವರೆಗೆ ಸಂಜೆ ೬ಕ್ಕೆ ಅಧ್ಯಾತ್ಮ ಪ್ರವಚನ ನಡೆಯಲಿದ್ದು, ಪುಂಡಲೀಕಪ್ಪ ಶಾಸ್ತ್ರಿ ಅಕ್ಕಮಹಾದೇವಿ ಶಿರೋಳ ಪ್ರವಚನ ನೀಡಲಿದ್ದಾರೆ. ಫೆ.೧೮ ಹಾಗೂ ಫೆ. ೧೯ ರಂದು ರಾತ್ರಿ ೮ಕ್ಕೆ ಕೊಪ್ಪಳದ ಯನಮೂರಪ್ಪ ಭಜಂತ್ರಿ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಫೆ.೧೯ ರಂದು ಬೆಳಗ್ಗೆ ೬ ಗಂಟೆಗೆ ದಿಗಂಬರೇಶ್ವರ ಕತೃ ಗದ್ದುಗೆಗೆ ಪೂಜೆ, ಬೆಳಗ್ಗೆ ೯ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಣ್ಣಿಕೇರಿಯ ನಿರ್ವಾಣ ಸ್ವಾಮೀಜಿ, ನಾಗರಾಳದ ಶೇಷಪ್ಪಯ್ಯ ಸ್ವಾಮೀಜಿ, ಕೋಲ್ಹಾರದ ಕಲ್ಲಿನಾಥ ಸ್ವಾಮೀಜಿ, ನರಗುಂದದ ಸಿದ್ಧಲಿಂಗ ಶಿವಯೋಗಿ ಶಿವಾಚಾರ್ಯ ಪಾಲ್ಗೊಳ್ಳಲಿದ್ದು, ಸಚಿವ ಮುರುಗೇಶ ನಿರಾಣಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ ೧೦.೩೦ಕ್ಕೆ ರೈತನ ಬಾಳಲ್ಲಿ ರಣಹದ್ದುಗಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದರು

.ಪ್ರಕಾಶ ನಾಯ್ಕರ ಮಾತನಾಡಿ, ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಭೂಸ್ವಾಧೀನ ವಿಷಯದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಆದರು ಸದನದಲ್ಲಿ ಧ್ವನಿ ಎತ್ತುತ್ತಿಲ್ಲ. ಹೋರಾಟಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಆಡಳಿತ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎನಿಸುತ್ತಿದೆ. ಫೆ.೧೫ ರಂದು ಕಲಾದಗಿಯಲ್ಲಿ ನಡೆಯುವ ಪ್ರಜಾಧ್ವನಿ ಯಾತ್ರೆಯಲ್ಲಿ ಸಿದ್ದರಾಮಯ್ಯ ಅವರಿಗೆ ಘೇರಾವ ಹಾಕಲಾಗುವುದು ಎಂದರು.

ಇನ್ನು ಸಚಿವ ಮುರುಗೇಶ ನಿರಾಣಿ ಸಮತೋಲನ ಕಳೆದುಕೊಂಡಿದ್ದಾರೆ. ಸಕ್ಕರೆ, ಗಡಿಯಾರ ಹಂಚಿಕೆ ಮಾಡುತ್ತಿದ್ದಾರೆ ದಿಗಂಬರೇಶ್ವರ ಮಠ ಎದುರು ಹಾಕಿಕೊಂಡ ಯಾರೂ ಉಳಿದಿಲ್ಲ. ಜಾತ್ರೆಗೆ ಪ್ರೀತಿಯಿಂದ ಆಹ್ವಾನಿಸಿದ್ದೇವೆ. ಆಗಮಿಸಿ ರೈತರ ಪರವಾದ ನಿಲುವು ತಾಳಲಿದ್ದಾರೆ ಎನ್ನುವ ವಿಶ್ವಾಸವಿದೆ. ಭೂಸ್ವಾಧೀನ ಮುಂದುವರಿಸಿದರೆ, ಚುನಾವಣೆಯಲ್ಲಿ ಬೀಳಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ೩೪ ಹಳ್ಳಿಗಳಲ್ಲಿ ನಿರಾಣಿ ಸೋಲಿಸಿ, ಭೂಮಿ ಉಳಿಸಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಹುಲಗಪ್ಪ ಬಂಡಿವಡ್ಡರ, ರಾವಣ್ಣ ಗಾಣಿಗೇರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net