ದಾಸ್ತಾನು ತಾಣವಾದ ತಂಗುದಾಣ

30sirsi2
Published on

ಶಿರಸಿ: ಸಾರ್ವಜನಿಕರಿಗೆ ಶಿಸ್ತಿನ ಪಾಠ ಮಾಡುವ ನಗರಾಡಳಿತದ ಕಚೇರಿ ಪಕ್ಕದಲ್ಲೇ ಬಸ್ ತಂಗುದಾಣವೊಂದು ತರಕಾರಿ, ಜೋಳ ದಾಸ್ತಾನು ಕೇಂದ್ರವಾಗಿ ಮಾರ್ಪಟ್ಟಿದೆ. ಬಸ್​ಗಾಗಿ ಕಾಯುವವರು ರಸ್ತೆಯ ಮೇಲೆ ನಿಲ್ಲುವ ಸ್ಥಿತಿ ಇದೆ.

ಇಲ್ಲಿನ ಮರಾಠಿಕೊಪ್ಪ ಮುಖ್ಯ ವೃತ್ತದ ಬಳಿ ಹಣ್ಣು, ಜೋಳ, ತರಕಾರಿ ಮಾರುವ ಬಿಡಿ ಅಂಗಡಿಕಾರರು ತರಕಾರಿ ಜತೆ ಉಳಿದ ಪರಿಕರಗಳನ್ನು ಹತ್ತಿರದ ಬಸ್ ತಂಗುದಾಣದಲ್ಲಿ ದಾಸ್ತಾನು ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಈ ತಂಗುದಾಣದ ಪ್ರಯೋಜನ ಸಿಗದಂತಾಗಿದೆ. ಹಲವು ತಿಂಗಳುಗಳಿಂದ ತಂಗುದಾಣವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿಕೊಡುವಂತೆ ಸಾರ್ವಜನಿಕರು ನಗರಾಡಳಿತಕ್ಕೆ ತಿಳಿಸಿದರೂ ಈವರೆಗೂ ಸ್ಪಂದನೆ ಸಿಕ್ಕಿಲ್ಲ.

ನಗರಸಭೆಯ ಆವರಣಕ್ಕೆ ತಾಗಿದಂತೆ ರಸ್ತೆ ಪಕ್ಕ ಇರುವ ಬಸ್ ನಿಲ್ದಾಣ ನಿರ್ವಣಕ್ಕೆ ಇಲ್ಲಿನ ಕಾಪೋರೇಷನ್ ಬ್ಯಾಂಕ್ ಪ್ರಾಯೋಜಕತ್ವ ನೀಡಿತ್ತು. ಸಾರ್ವಜನಿಕರಿಗೆ ಅನುಕೂಲವಾಗಲೆಂದು ಮುಖ್ಯರಸ್ತೆ ಪಕ್ಕದಲ್ಲಿ ತಂಗುದಾಣ ನಿರ್ವಿುಸಲಾಗಿತ್ತು. ಕೆಲ ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥರು ಉಳಿದುಕೊಳ್ಳುವ ತಾಣವಾಗಿದ್ದ ಈ ಜಾಗ ಇದೀಗ ಜೋಳ, ತರಕಾರಿ ಸಂಗ್ರಹಿಸುವ ಜಾಗವಾಗಿ ಮಾರ್ಪಟ್ಟಿದೆ. ತಂಗುದಾಣ ನಿರ್ಮಾಣ ಆದಂದಿನಿಂದ ಈವರೆಗೂ ಸಾರ್ವಜನಿಕರಿಗೆ ಬಳಸಿಕೊಳ್ಳಲಾಗಿಲ್ಲ. ಜನಸಂಚಾರ ಇಲ್ಲದ ಕಾರಣ ಇಡೀ ವಾತಾವರಣ ಪಾಚಿಗಟ್ಟಿದೆ. ಕೊಳಚೆ ಸಂಗ್ರಹವಾಗಿದೆ. ಹೀಗಾಗಿ ತಕ್ಷಣ ಸಂಬಂಧಪಟ್ಟ ಇಲಾಖೆ ತಂಗುದಾಣವನ್ನು ಜನೋಪಯೋಗಿಯಾಗಿ ಮಾಡಬೇಕು ಎಂದು ನಗರ ವಾಸಿಗಳು ಆಗ್ರಹಿಸುತ್ತಿದ್ದಾರೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ವಿುಸಿದ ತಂಗುದಾಣ ತರಕಾರಿ ಸಂಗ್ರಹಿಸುವ ತಾಣವಾಗಿದೆ. ನಗರಾಡಳಿತದ ಚುಕ್ಕಾಣಿ ಹಿಡಿದವರು ಈ ಬಗ್ಗೆ ಗಮನ ನೀಡಿ ತಂಗುದಾಣವನ್ನು ಬಸ್​ಗಾಗಿ ಕಾಯುವ ಜನರಿಗೆ ಮುಕ್ತಗೊಳಿಸಬೇಕು. | ಪ್ರಸನ್ನ ನಾಯ್ಕ ಸ್ಥಳೀಯ ನಾಗರಿಕ

ಸಾರ್ವಜನಿಕರಿಗಾಗಿ ನಿರ್ವಿುಸಿದ ಸ್ಥಳ ಸಾರ್ವಜನಿಕರೇ ಬಳಸಬೇಕು. ಅಂತಹ ಜಾಗದಲ್ಲಿ ತರಕಾರಿ ದಾಸ್ತಾನು ಮಾಡುವುದು ಸರಿಯಲ್ಲ. ತಕ್ಷಣ ತೆರವು ಮಾಡಿ ಜನರಿಗೆ ಅನುಕೂಲ ಮಾಡಲು ಸೂಚಿಸಲಾಗುವುದು. | ರಮೇಶ ನಾಯಕ ಪೌರಾಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net