

ಮುಂಡಗೋಡ: ಪಟ್ಟಣದ ಎಪಿಎಂಸಿ ಗೋದಾಮಿನಲ್ಲಿ ಯೂರಿಯಾ ಗೊಬ್ಬರದ ದಾಸ್ತಾನು ಇದ್ದರೂ ವಿತರಣೆ ಮಾಡುತ್ತಿಲ್ಲ ಎಂದು ಕೆಲ ರೈತರು ಬುಧವಾರ ಸಂಜೆ ಆಕ್ರೋಶ ವ್ಯಕ್ತಪಡಿಸಿದರು.
ಒಬ್ಬ ರೈತನಿಗೆ 3 ಚೀಲ ಯೂರಿಯಾ ಗೊಬ್ಬರ ನೀಡಬೇಕು ಆದರೆ, ಟಿಎಸ್ಎಸ್ ಅಧಿಕಾರಿಗಳು ತಮಗೆ ಬೇಕಾದ ಒಬ್ಬೊಬ್ಬ ರೈತನಿಗೆ 10-20 ಚೀಲಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ವಾಹನದಲ್ಲಿ ತುಂಬಿದ ಗೊಬ್ಬರದ ಚೀಲಗಳನ್ನು ಇಳಿಸಿ ಸಿಬ್ಬಂದಿ ಜೊತೆ ವಾಗ್ವಾದಕ್ಕೆ ಇಳಿದು ಕೃಷಿ ಅಧಿಕಾರಿ ಎಂ.ಎಸ್. ಕುಲಕರ್ಣಿ ಅವರನ್ನು ಸ್ಥಳಕ್ಕೆ ಕರೆಯಿಸಿಕೊಂಡರು.
ನಮಗೆ ಪೂರೈಕೆ ಮಾಡಲಾದ ಯೂರಿಯಾ ಗೊಬ್ಬರದಲ್ಲಿ ಕೇವಲ 25 ಚೀಲ ಮಾತ್ರ ಇದೆ ಎಂದು ಟಿಎಸ್ಎಸ್ನವರು ಹೇಳಿದಾಗ ರೈತರು ಟಿಎಸ್ಎಸ್ ಗೋದಾಮಿನಲ್ಲಿ ಒಟ್ಟು 113 ಚೀಲ ಗೊಬ್ಬರ ಇದೆ ಎಂದು ವಾದ ಮಾಡಿದರು. ಅದು ಈಗಾಗಲೆ ರೈತರಿಗೆ ಪೂರೈಕೆ ಮಾಡಲು ಬಿಲ್ ಮಾಡಲಾಗಿದೆ. ಆದರೆ, ಅವರು ವಾಹನದ ಸಮಸ್ಯೆಯಿಂದ ತೆಗೆದುಕೊಂಡು ಹೋಗಿಲ್ಲ. ಯಾವ ರೈತರಿಗೂ 10-20 ಚೀಲ ವಿತರಣೆ ಮಾಡಿಲ್ಲ. ಆದರೆ, ಕೆಲವು ರೈತರು ಇಬ್ಬರು ಮೂವರು ಸೇರಿ ಒಂದೇ ವಾಹನದಲ್ಲಿ ಗೊಬ್ಬರದ ಚೀಲಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನು ಕೇಳಿ ಆಕ್ರೋಶಗೊಂಡ ಕೆಂಜೋಡಿ ಗಲಬಿ, ಸುಭಾಸ ಭೋವಿ, ಸುಭಾಸ ಕುಂಬಾರ ಹಾಗೂ ಇನ್ನಿತರ ರೈತರು ದಾಸ್ತಾನು ಇದ್ದ ಗೊಬ್ಬರವನ್ನು ಇಲ್ಲಿರುವ ರೈತರಿಗೆ ಮೊದಲು ವಿತರಣೆ ಮಾಡಿ ಎಂದು ಆಗ್ರಹಿಸಿದರು. ನಂತರ ಅಲ್ಲಿದ್ದ ರೈತರಿಗೆ ಗೊಬ್ಬರ ಪೂರೈಕೆ ಮಾಡಲಾಯಿತು.