

ಬಾಗಲಕೋಟೆ: ವಚನ ಸಾಹಿತ್ಯಕ್ಕೆ ನಾಂದಿ ಹಾಡಿದವರು ದೇವರ ದಾಸಿಮಯ್ಯನವರು ಎಂದು ಬಾಗಲಕೋಟೆ ದೇವಾಂಗ ಸಮಾಜದ ಅಧ್ಯಕ್ಷರು, ನಿವೃತ್ತ ಉಪನ್ಯಾಸಕರಾದ ಎಸ್.ವಿ. ಚೌಡಾಪುರ ಹೇಳಿದರು.
ನಗರದ ವಿದ್ಯಾಗಿರಿಯ ಶಿವಶಕ್ತಿ ಬಡಾವಣೆಯ ಶ್ರೀಹರಿಧಾಮ ನಿಲಯದಲ್ಲಿ ಭಾನುವಾರ ನಡೆದ ದೇವರ ದಾಸಿಮಯ್ಯನವರ ಮಾಸಿಕ ಚಿಂತನಗೋಷ್ಠಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಂಸ್ಕೃತ ಒಂದು ವರ್ಗದ ಭಾಷೆಯಾಗಿತ್ತು. ಇದು ಜನಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ. ಇದರ ಜತೆಗೆ ಹಳಗನ್ನಡ ಸಾಹಿತ್ಯ ಕೂಡ ಚಾಲ್ತಿಯಲ್ಲಿತ್ತು. ಹಳಗನ್ನಡ ಕೂಡ ಅಂದುಕೊಂಡಷ್ಟು ಸುಲಭವಾಗಿ ತಿಳಿಯುತ್ತಿರಲಿಲ್ಲ. ಜನಸಾಮಾನ್ಯರಿಗೆ ಸರಳವಾಗಿ ತಿಳಿಯುವ ರೀತಿಯಲ್ಲಿ ದೇವರ ದಾಸಿಮಯ್ಯನವರು ವಚನಗಳನ್ನು ಬರೆಯಲು ಆರಂಭಿಸಿದರು. ಮುಂದೆ ಅದು ವಚನ ಸಾಹಿತ್ಯವಾಗಿ ಬೆಳೆಯಿತು ಎಂದರು.
ಮೊಟ್ಟ ಮೊದಲ ಬಾರಿಗೆ ದಾಸಿಮಯ್ಯನವರು ವಚನಗಳನ್ನು ಬರೆಯಲಾರಂಭಿಸಿದ ಹಿನ್ನೆಲೆಯಲ್ಲಿ ಅವರನ್ನು ಆದ್ಯ ವಚನಕಾರ ಎಂದು ಕರೆಯಲಾಗುತ್ತಿದೆ. ಮುಂದೆ 12 ನೇ ಶತಮಾನದಲ್ಲಿ ಬಸವಣ್ಣನವರು, ಶರಣರು ವಚನ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದರು ಎಂದು ಅವರು ಹೇಳಿದರು.
ಬಸವಣ್ಣನವರು ತಮ್ಮ ಅನೇಕ ವಚನಗಳಲ್ಲಿ ದೇವರ ದಾಸಿಮಯ್ಯನವರ ಹೆಸರು ಪ್ರಸ್ತಾಪಿಸಿದ್ದಾರೆ. ದೇವರ ದಾಸಿಮಯ್ಯ ಸೇರಿದಂತೆ ಬಹುತೇಕ ಶರಣರು ಸಮಾಜದಲ್ಲಿನ ಮೌಢ್ಯಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವಚನಗಳನ್ನು ರಚಿಸಿದ್ದಾರೆ. ಅವುಗಳನ್ನು ಅರ್ಥ ಮಾಡಿಕೊಂಡು ಜನತೆ ಸನ್ಮಾರ್ಗದಲ್ಲಿ ನಡೆಯಬೇಕಿದೆ ಎಂದರು.
ದೇವರ ದಾಸಿಮಯ್ಯನವರ ವಚನಗಳ ಸಾರವನ್ನು ಸಮಾಜದ ಜನತೆಗೆ ತಿಳಿಸುವ ನಿಟ್ಟಿನಲ್ಲಿ ದೇವರ ದಾಸಿಮಯ್ಯನವರ ವಚನಗಳ ಕುರಿತಂತೆ ಪ್ರತಿ ತಿಂಗಳು ಒಬ್ಬರ ಮನೆಯಲ್ಲಿ ವಚನ ಚಿಂತನಗೋಷ್ಠಿ ಏರ್ಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಸಮಾಜದ ಹಿರಿಯರಾದ. ರಂಗಪ್ಪಣ್ಣ ಶೆಬಿಮಕಟ್ಟಿ ಮಾತನಾಡಿ, ಎಲ್ಲರೂ ಸನ್ಮಾರ್ಗದಲ್ಲಿ ನಡೆಯಲು ದೇವರ ದಾಸಿಮಯ್ಯನವರ ವಚನಗಳು ಮಾರ್ಗದರ್ಶಿ ಆಗಿವೆ ಎಂದರು.
ಸಹಕಾರ ಇಲಾಖೆಯ ಅಪರ ನಿಬಂಧಕ ಎಚ್.ವೈ. ಗದ್ದನಕೇರಿ ಅವರು ದೇವರ ದಾಸಿಮಯ್ಯನವರ ವಚನಗಳ ಮಹತ್ವ ವಿವರಿಸಿದರು.
ಬಾಗಲಕೋಟೆ ದೇವಾಂಗ ಸಮಾಜದ ಉಪಾಧ್ಯಕ್ಷ ಮೋಹನ ಆರ್. ಗೌರೀಶ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವರ ದಾಸಿಮಯ್ಯನವರ ವಚನಗಳ ಸಾರ ಅರಿತು, ಸಮಾಜದ ಜನತೆ ಉತ್ತಮ ಮಾರ್ಗದಲ್ಲಿ ನಡೆಯಬೇಕು. ಆ ಉದ್ದೇಶದಿಂದಲೇ ಮಾಸಿಕ ಚಿಂತನಗೋಷ್ಠಿ ಕಾರ್ಯಕ್ರಮ ಆರಂಭಿಸಿರುವುದು ಸ್ವಾಗತಾರ್ಹ ಕಾರ್ಯವಾಗಿದೆ ಎಂದರು.
ಶಿಕ್ಷಣ ಇಲಾಖೆಯ ಸುರೇಶ ದಡ್ಡಿ ಅವರಿಂದ ಭಕ್ತಿ ಸೇವೆ ನಡೆಯಿತು. ಪ್ರವೀಣ ಹೆರೂರ,ಶಿವಶಂಕರಪ್ಪ ಮುತ್ತಗಿ, ಬಸವರಾಜ ಚೆನ್ನಿ, ಮಲ್ಲಪ್ಪ ಚೆನ್ನಿ, ಕರಜಗಿ, ಮೊದಲಾದವರು ಇದ್ದರು.