

ಬಾಗಲಕೋಟೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ೨೩ ನೇ ಮಹಾ ಅಧಿವೇಶನ ದಾವಣಗೆರೆಯಲ್ಲಿ ಡಿ.೨೪ ರಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಭಾಗದಿಂದ ಆಗಮಿಸುವ ಸಂಘಟನೆ ಪದಾಽಕಾರಿಗಳು, ಸಮಾಜ ಬಾಂಧವರಿಗೆ ಸಕಲ ಸೌಕರ್ಯ ಒದಗಿಸಲಾಗುವುದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದಾವಣಗೆರೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಶಿವಯೋಗೆಪ್ಪ ಹೇಳಿದರು.
ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ನಡೆಯುವ ಅಧಿವೇಶನವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಮಾಜಿ ಬಿ.ಎಸ್.ಯಡಿಯೂರಪ್ಪ, ಶಾಮನೂರ ಶಿವಶಂಕ್ರಪ್ಪ ಸೇರಿದಂತೆ ವಿವಿಧ ನಾಯಕರು ಆಗಮಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮರ್ಮು ಅವರಿಗೆ ಆಹ್ವಾನ ನೀಡಲಾಗಿದೆ ಎಂದರು.
ವೀರಶೈವ ಲಿಂಗಾಯತರು ಒಂದೇ. ಇದರಲ್ಲಿ ಬೇಧ, ಭಾವವಿಲ್ಲ. ಮೀಸಲಾತಿ ನೆಪದಲ್ಲಿ ಒಳ ಪಂಗಡಗಳ ಒಡಕು ಸರಿಯಲ್ಲ. ಎಲ್ಲರು ಒಂದಾಗಬೇಕು. ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ ಭಾಗದಲ್ಲಿ ಲಿಂಗಾಯತರು, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ಭಾಗದಲ್ಲಿ ವೀರಶೈವ ಅಂತ ಕರೆಯುತ್ತಾರೆ. ಬೇರೆ ಹೆಸರಿಂದ ಕರೆಯುತ್ತಾರೆ. ಎಲ್ಲರು ಒಂದೇ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಬಾಗಲಕೋಟೆ ಜಿಲ್ಲಾಧ್ಯಕ್ಷ ಜಿ.ಎನ್.ಪಾಟೀಲ ಮಾತನಾಡಿ, ಸಮಾಜದ ಸಂಘಟನೆ ಮಾಡಲು, ಒಳಪಂಗಡಗಳಲ್ಲಿ ಸಮಾನತೆ, ಸೌಹಾರ್ದತೆ ಬೆಳೆಸಲು ಅಧಿವೇಶನ ಹಮ್ಮಿಕೊಳ್ಳಲಾಗಿದೆ. ಎಲ್ಲರು ಭಾಗವಹಿಸಬೇಕು. ಮಹಾಸಭಾ ಮಹಿಳಾ ಘಟಕ, ಯುವ ಘಟಕ, ರೈತ ಘಟಕ, ಉದ್ಯಮ ಘಟಕ, ವ್ಯಾಪಾರಸ್ಥರ ಘಟಕದ ಪದಾಽಕಾರಿಗಳು ಪಾಲ್ಗೊಳ್ಳಬೇಕು. ವರ್ಗ,ವರ್ಣ, ಲಿಂಗ ರಹಿತ ಸಮಾಜ ನಿರ್ಮಿಸಲು ಮಹಾಸಭಾ ಕೆಲಸ ಮಾಡುತ್ತಿದೆ. ಅಽವೇಶನದಲ್ಲಿ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಲು, ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಮೀಸಲಾತಿ ಕಲ್ಪಿಸಲು ಒತ್ತಾಯಿಸಲಾಗುವುದು. ಅಲ್ಲದೆ ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡು ಮಂಡಿಸಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಮಲ್ಲಿಕಾರ್ಜುನ ಕಟ್ಟಿಮನಿ, ವಿಜಯಕುಮಾರ ಅಜ್ಜಂಪುರ, ಗೀತಾ ದಾನಶೆಟ್ಟಿ, ಬಸವರಾಜ ಮುಕ್ಕುಪ್ಪಿ ಸೇರಿದಂತೆ ಇತರರು ಇದ್ದರು.